ಪ್ಯಾರಿಸ್: ಪ್ಯಾರಾಲಿಂಪಿಕ್ಸ್ ಪದಕದಾಟದಲ್ಲಿ ಈ ಬಾರಿ ಭಾರತಕ್ಕೆ ಪದಕಗಳು ಹೆಚ್ಚಿನ ಸಂಖ್ಯೆಯಲ್ಲಿ ಒಲಿದುಬರುತ್ತಿದ್ದು, ಭಾರತೀಯ ಕ್ರೀಡಾಪಟುಗಳು ನಾವ್ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಅದ್ಭುತ ಪ್ರದರ್ಶನದ ಮೂಲಕ ಸಾಬೀತುಪಡಿಸುತ್ತಿದ್ದಾರೆ. ಈಗ ಈ ಸಾಲಿಗೆ 27 ವರ್ಷದ ಯೋಗೇಶ್ ಕಥುನಿಯಾ ಸೇರ್ಪಡೆಯಾಗಿದ್ದು, ಡಿಸ್ಕಸ್ ಥ್ರೋ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ.
ಇಂದು ನಡೆದ ಡಿಸ್ಕಸ್ ಎಸೆತದ ಫೈನಲ್ ಪಂದ್ಯದಲ್ಲಿ 42.22 ಮೀ. ದೂರ ಅತ್ಯುತ್ತಮ ಎಸೆತ ದಾಖಲಿಸಿದ ಯೋಗೇಶ್, ಬೆಳ್ಳಿಗೆ ಕೊರಳೊಡ್ಡಿದ್ದರೆ, ಬ್ರೆಜಿಲ್‌ನ ಕ್ಲೌಡಿನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 86 ಮೀ ಎಸೆದು ಚಿನ್ನದ ಪದಕಕ್ಕೆ ಮುತ್ತಿಟ್ಟು, ಪ್ರಥಮ ಸ್ಥಾನ ಅಲಂಕರಿಸಿದ್ದಾರೆ. ಪ್ಯಾರಾಲಿಂಪಿಕ್ಸ್ ಓಟದಲ್ಲಿ ಭಾರತಕ್ಕೆ ಇದು 8ನೇ ಪದಕ ಎಂಬುದು ಗಮನಾರ್ಹ ಹಾಗೂ ಹೆಮ್ಮೆಯ ಸಂಗತಿ.
ಗ್ರೀಸ್ನ ಕಾನ್‌ಸ್ಟಾಂಟಿನೋಸ್ ಟ್ಜೌನಿಸ್ 41.32 ಮೀ. ದೂರ ಎಸೆದು ಕಂಚಿನ ಪದಕ ಗೆದ್ದರೆ, ಸ್ಲೋವಾಕಿಯಾದ ಡುಸಾನ್ ಲಕ್ಜ್ಕೊ 41.20 ಮೀಟರ್ ಎಸೆದು ನಾಲ್ಕನೇ ಸ್ಥಾನ ಅಲಂಕರಿಸಿದರು. ಇನ್ನು ಸೆರ್ಬಿಯಾದ ನೆಬೊಜ್ಸಾ ಡ್ಯೂರಿಕ್ ಅವರು ಅಂತಿಮ ಸುತ್ತಿಗೆ ಅರ್ಹತೆ ಪಡೆದರೂ ಸಹ ಫೈನಲ್‌ನಲ್ಲಿ ಭಾಗವಹಿಸಲಿಲ್ಲ. ಈ ಸೀಸನ್ನ ಅತ್ಯುತ್ತಮ ಥ್ರೋ ದಾಖಲಿಸಿದ ಯೋಗೇಶ್, ಇದೀಗ ಬೆಳ್ಳಿಗೆ ಮುತ್ತಿಟ್ಟು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.