ನವದೆಹಲಿ: ರೈಲು ಪ್ರಯಾಣ ಅತ್ಯಂತ ಸುರಕ್ಷಿತ ಹಾಗೂ ಸುಖಕರ ಎಂದು ಹೇಳಲಾಗುತ್ತದೆ. ಸಾಮಾನ್ಯ ಜನರು ಬಹಳ ಕಡಿಮೆ ದರದಲ್ಲಿ ತಮ್ಮ ದೂರದೂರಿಗೆ ಪ್ರಯಾಣಿಸಲು ರೈಲು ಮಾರ್ಗವೇ ಸರಳ ಹಾಗೂ ಸೂಕ್ತ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಸುಖಕರ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಹೊಚ್ಚ ಹೊಸ ರೈಲುಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ವಂದೇ ಭಾರತ ಎಕ್ಸ್ಪ್ರೆಸ್ ಟ್ರೈನ್ಗಳು ಸದ್ಯ ಸಖತ್ ಸದ್ದು ಮಾಡುತ್ತಿವೆ.
ಆಕರ್ಷಕ ಆಸನಗಳು, ಒಳ ವಿನ್ಯಾಸಗಳು ಪ್ರಯಾಣಿಕರನ್ನು ಸೆಳೆಯುತ್ತಿವೆ. ಇಂತಹ ಎಕ್ಸ್ಪ್ರೆಸ್ ರೈಲಿನಲ್ಲಿ ಕಂಡು ಬಂದ ಸಮಸ್ಯೆಯೊಂದರ ಬಗ್ಗೆ ಇದೀಗ ಕೆಲವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ವಂದೇ ಭಾರತ್ ರೈಲು ಪ್ರಯಾಣಿಕರ ಒಂದು ವಿಭಾಗ ಅಂದರೆ ಊಟದ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಯಾಣಿಕರು ಇದೀಗ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡವರಿಗೆ ಆಹಾರ ಶುಲ್ಕ ಏಕೆ ವಿಧಿಸಲಾಗುತ್ತಿದೆ? ನೀರಿನ ಬಾಟಲಿಯನ್ನು ನಾವೇ ನಮ್ಮ ಮನೆಯಿಂದ ತರುವಾಗ ಕಡ್ಡಾಯವಾಗಿ ನೀರು ಬಾಟಲಿ ಮತ್ತು ದಿನಪತ್ರಿಕೆಗಳಿಗೆ 20 ರೂ. ಕಡ್ಡಾಯ ಹಣ ಯಾಕೆ ಪಾವತಿಸಬೇಕು ಎಂದು ಪ್ರಯಾಣಿಕರು ರೈಲ್ವೆ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.
ಭಾರತೀಯ ರೈಲ್ವೇ ಆಹಾರ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಪ್ರಕಾರ, ನೀರಿನ ಬಾಟಲಿಗಳು ಮತ್ತು ದಿನಪತ್ರಿಕೆಗಳಿಗೆ ಪ್ರತಿ ಪ್ರಯಾಣಿಕರಿಗೆ 20 ರೂ. ಕಡ್ಡಾಯ ಶುಲ್ಕ (ಕೇಟರಿಂಗ್ ಶುಲ್ಕ) ವಿಧಿಸಲಾಗುತ್ತದೆ. ಆದಾಗ್ಯೂ, ಐಆರ್ಸಿಟಿಸಿಯ ಈ ನಿಲುವು ಸಂಪೂರ್ಣವಾಗಿ ಮನವರಿಕೆಯಾಗುವುದಿಲ್ಲ, ಸದ್ಯ ಈ ವಿಚಾರಕ್ಕೆ ಗರಂ ಆದ ಪ್ರಯಾಣಿಕರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಟಿಕೆಟ್ನ ಹಂಚಿಕೊಂಡಿದ್ದು, 20 ರೂ. ಹಣವನ್ನು ಏಕೆ ಕಡ್ಡಾಯ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನಮ್ಮ ಮನೆಯಿಂದಲೇ ನಾವು ನೀರಿನ ಬಾಟಲಿಗಳನ್ನು ತರುತ್ತೇವೆ. ರೈಲು ಮಧ್ಯಾಹ್ನ 1:45ರ ಸಮಯಕ್ಕೆ ಹೊರಡುತ್ತದೆ. ದಿನಪತ್ರಿಕೆ ಓದುವ ಸಮಯವೂ ಮುಗಿದಿರುತ್ತದೆ. ಹೀಗಿರುವಾಗ ಕಡ್ಡಾಯ ಹಣ ಏಕೆ? ಎಂದು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ,