ನವದೆಹಲಿ: ರಾಷ್ಟ್ರೀಯ ಸ್ವಚ್ಛ ಗಾಳಿ ಕಾರ್ಯಕ್ರಮದ (ಎನ್‌ಸಿಎಪಿ) ವ್ಯಾಪ್ತಿಗೆ ಬರುವ ದೇಶದ 131 ನಗರಗಳ ಪೈಕಿ 95 ನಗರಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿದೆ.
2017-18ನೇ ಸಾಲಿಗೆ ಹೋಲಿಸಿದರೆ 21 ನಗರಗಳಲ್ಲಿ 10 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಮಾಲಿನ್ಯಕಾರಣ ಕಣಗಳಿಂದಾಗುವ (ಪಿಎಂ10) ವಾಯು ಮಾಲಿನ್ಯ ಶೇ 40ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ದತ್ತಾಂಶಗಳು ಹೇಳಿವೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪಿಎಂ10 ವಾಯುಮಾಲಿನ್ಯ ಶೇ 20ರಿಂದ 30ರಷ್ಟು ಮತ್ತು ದಾವಣಗೆರೆಯಲ್ಲಿ ಶೇ 10ರಿಂದ ಶೇ 20ರಷ್ಟು ಕಡಿಮೆಯಾಗಿದೆ.
131 ನಗರಗಳ ಪೈಕಿ 18 ನಗರಗಳು ಮಾತ್ರ ಪಿಎಂ10 ವಾಯುಮಾಲಿನ್ಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡವನ್ನು (ಪ್ರತಿ ಘನ ಮೀಟರ್‌ಗೆ 60 ಮೈಕ್ರೊಗ್ರಾಂಗಳು) ಕಟ್ಟುನಿಟ್ಟಾಗಿ ಅನುಸರಣೆ ಮಾಡಿವೆ ಎಂದೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ಮಾಯುಮಾಲಿನ್ಯ ಪ್ರಮಾಣ ಶೇ 40ರಷ್ಟು ಇಳಿಕೆ ಕಂಡ 21 ನಗರಗಳ ಪಟ್ಟಿಯಲ್ಲಿ ವಾರಾಣಸಿ, ಧನ್‌ಬಾದ್, ಬರ್ನಿಹಾಟ್, ಬರೇಲಿ, ಫಿರೋಜಾಬಾದ್, ಡೆಹ್ರಾಡೂನ್, ತೂತ್ತುಕುಡಿ, ನಾಲಾಗಡ, ಮೊರದಾಬಾದ್, ಖುರ್ಜಾ, ತಿರುಚ್ಚಿ, ಕೊಹಿಮಾ, ಲಖನೌ, ಕಾನ್ಪುರ, ಕಡಪ, ಶಿವಸಾಗರ್, ಸುಂದರ್‌ನಗರ್, ಆಗ್ರಾ, ಗ್ರೇಟರ್ ಮುಂಬೈ, ರಿಷಿಕೇಶ್ ಮತ್ತು ಪರ್ವಾಣೂ ನಗರಗಳಿವೆ.
ಅಹಮದಾದ್, ಗಾಜಿಯಾಬಾದ್, ರಾಜ್‌ಕೋಟ್, ಜಲಂಧರ್, ರಾಯ್‌ಬರೇಲಿ, ಅಮೃತಸರ, ಕೋಲ್ಕತ್ತ, ಜಮ್ಮು, ಸಿಲ್ಚಾರ್, ವಿಜಯವಾಡ, ನಯಾ ನಂಗಲ್, ದೀಮಾಪುರ, ಬದ್ದೀ ಮತ್ತು ಜೋಧಪುರಗಳಲ್ಲಿ ಪಿಎಂ10 ವಾಯುಮಾಲಿನ್ಯ ಪ್ರಮಾಣ ಶೇ30ರಿಂದ ಶೇ 40ರಷ್ಟು ಇಳಿಕೆಯಾಗಿದೆ.
ಬೆಂಗಳೂರು, ಖನ್ನಾ, ದುರ್ಗಾಪುರ, ಕರ್ನೂಲ್, ಡೆರಾ ಬಾಬಾ ನಾನಕ್, ವಡೋದರ, ಅಲಹಾಬಾದ್, ಆಸನ್‌ಸೋಲ್, ಹೈದರಾಬಾದ್, ಗೋರಖ್‌ಪುರ, ರಾಂಚಿ, ಅಕೋಲಾ, ಅನಂತಪುರ, ದುರ್ಗ್ ಭಿಲಾಯಿನಗರ, ಸೂರತ್ ಮತ್ತು ನೊಯಿಡಾ ನಗರಗಳಲ್ಲಿ ಮಾಲಿನ್ಯ ಪ್ರಮಾಣ ಶೇ 20ರಿಂದ 30ರಷ್ಟು ಕುಗ್ಗಿದೆ ಎಂದು ದತ್ತಾಂಶಗಳು ಹೇಳಿವೆ.
ರಾಜ್ಯದ ದಾವಣಗೆರೆ, ರಾಷ್ಟ್ರ ರಾಜಧಾನಿ ದೆಹಲಿ, ಹೌರಾ, ಥಾಣೆ, ಚಿತ್ತೂರು, ಕಾಲಾ ಅಂಬ್, ಮಂಡಿ ಗೋವಿಂದಗಡ, ಅಮರಾವತಿ, ಪಟಿಯಾಲಾ, ಜೈಪುರ, ಓಂಗೋಲ್, ಚಂದ್ರಾಪುರ, ನಾಸಿಕ್, ಝಾನ್ಸಿ, ಸಾಂಗ್ಲಿ, ಕೋಟಾ ಮತ್ತು ರಾಜಮುಂಡ್ರಿಗಳಲ್ಲಿ ಪಿಎಂ10 ವಾಯುಮಾಲಿನ್ಯ ಶೇ 10ರಿಂದ 20ರಷ್ಟು ಇಳಿಕೆಯಾಗಿದೆ.
2024ರ ಹೊತ್ತಿಗೆ ಮಾಲಿನ್ಯಕಾರಕ ಕಣಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ಶೇ 20ರಿಂದ 30ರಷ್ಟು ಕಡಿಮೆ ಮಾಡುವ ಗುರಿಯೊಂದಿಗೆ ಭಾರತವು 2019ರಲ್ಲಿ ರಾಷ್ಟ್ರೀಯ ಸ್ವಚ್ಛ ಗಾಳಿ ಯೋಜನೆಗೆ ಚಾಲನೆ ನೀಡಿತ್ತು. ಇದಕ್ಕೆ 2017ರ ದತ್ತಾಂಶಗಳನ್ನು ಮೂಲ ಆಧಾರವಾಗಿಟ್ಟುಕೊಳ್ಳಲಾಗಿತ್ತು.
ಈ ಗುರಿಯನ್ನು ನಂತರ ಪರಿಷ್ಕರಿಸಲಾಗಿದ್ದು, 2026ರ ಹೊತ್ತಿಗೆ 131 ನಗರಗಳಲ್ಲಿ ವಾಯುಮಾಲಿನ್ಯವನ್ನು ಶೇ 40ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ 2019-20ನೇ ಸಾಲಿನ ದತ್ತಾಂಶಗಳನ್ನು ಮೂಲ ಆಧಾರವಾಗಿ ಪರಿಗಣಿಸಲಾಗುತ್ತಿದೆ.
ಗಾಳಿಯ ಗುಣಮಟ್ಟ/ವಾಯುಮಾಲಿನ್ಯದ ಪ್ರಮಾಣವನ್ನು ಮೌಲ್ಯಮಾಪನ ಮಾಡುವಾಗ ಸಾಮಾನ್ಯವಾಗಿ 10 ಮೈಕ್ರಾನ್‌ಗಿಂತ ಕಡಿಮೆ ತೂಕದ ಮಾಲಿನ್ಯಕಾರಕ ಕಣಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
ಸ್ವಚ್ಛಗಾಳಿ: ಸೂರತ್‌ಗೆ ಮೊದಲ ರ‍್ಯಾಂಕ್
ಗಾಳಿಯ ಗುಣಮಟ್ಟ ಸುಧಾರಣೆಯಾಗುತ್ತಿರುವ ಪ್ರಮುಖ ನಗರಗಳ ಪೈಕಿ ಸೂರತ್ ಮೊದಲ ರ‍್ಯಾಂಕ್ ಪಡೆದಿದೆ. ಜಬಲ್ಪುರ ಮತ್ತು ಆಗ್ರಾ ನಗರಗಳು ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ. ರಾಜಸ್ಥಾನದ ಜೈಪುರದಲ್ಲಿ ಶನಿವಾರ ನಡೆದ 'ಸ್ವಚ್ಛ ವಾಯು ಸರ್ವೇಕ್ಷಣಾ-2024' ರಾಷ್ಟ್ರೀಯ ಕಾರ್ಯಾಗಾರದಲ್ಲಿ ಉನ್ನತ ರ‍್ಯಾಂಕ್ ಪಡೆದ ನಗರಗಳಿಗೆ 'ರಾಷ್ಟ್ರೀಯ ಸ್ವಚ್ಛ ಗಾಳಿ ನಗರ ಪ್ರಶಸ್ತಿ'ಯನ್ನು ಕೇಂದ್ರ ಪರಿಸರ ಸಚಿವಾಲಯ ಪ್ರದಾನ ಮಾಡಿತು.
10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳ ವಿಭಾಗದಲ್ಲಿ ಸೂರತ್ (ಗುಜರಾತ್) ಜಬಲ್ಪುರ (ಮಧ್ಯಪ್ರದೇಶ) ಮತ್ತು ಆಗ್ರಾಗಳು (ಉತ್ತರ ಪ್ರದೇಶ) ಮೊದಲ ಮೂರು ರ‍್ಯಾಂಕ್ ಗಳಿಸಿದರೆ 3 ಲಕ್ಷದಿಂದ 10 ಲಕ್ಷದ ಒಳಗಡೆ ಜನಸಂಖ್ಯೆ ಇರುವ ನಗರಗಳಲ್ಲಿ ಫಿರೋಜಾಬಾದ್ (ಉತ್ತರ ಪ್ರದೇಶ) ಅಮರಾವತಿ (ಉತ್ತರಪ್ರದೇಶ) ಮತ್ತು ಝಾನ್ಸಿ (ಉತ್ತರ ಪ್ರದೇಶ) ನಗರಗಳು ಉನ್ನತ ಸ್ಥಾನ ಪಡೆದಿವೆ.
3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳ ಪೈಕಿ ರಾಯ್‌ಬರೇಲಿ (ಉತ್ತರ ಪ್ರದೇಶ) ನಲ್ಗೋಂಡಾ (ತೆಲಂಗಾಣ) ನಾಲಾಗಡ (ಹಿಮಾಚಲ ಪ್ರದೇಶ) ಮೊದಲ ಮೂರು ರ‍್ಯಾಂಕ್ ಗಳಿಸಿವೆ.