ನಾವಡ: ಬಿಹಾರದ ನಾವಡ ಜಿಲ್ಲೆಯ ಹಳ್ಳಿಯೊಂದರಲ್ಲಿ 21 ಮನೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಮಿ ಸಂಬಂಧಿತ ವಿವಾದ ಕಾರಣದಿಂದ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಘಟನೆಯಲ್ಲಿ ಯಾರೊಬ್ಬರಿಗೂ ಹಾನಿಯಾಗಿಲ್ಲ. ಮಂಜ್ಹಿ ತೊಲಾ ಗ್ರಾಮದ ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
'ಪೊಲೀಸ್ ಠಾಣೆಗೆ ಬುಧವಾರ ಸಂಜೆ 7.30 ಸುಮಾರಿಗೆ ಮಂಜ್ಹಿ ಗ್ರಾಮದಲ್ಲಿ ಮನೆಗಳಿಗೆ ಬೆಂಕಿ ಹಚ್ಚಿರುವ ಬಗ್ಗೆ ದೂರವಾಣಿ ಕರೆ ಬಂದಿದೆ. ತಕ್ಷಣ ಅಧಿಕಾರಿಗಳು ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಬೆಂಕಿ ಹೆಚ್ಚು ಪ್ರದೇಶ ಆವರಿಸಿದ್ದರಿಂದ ನಂದಿಸಲು ತುಸು ಸಮಯ ಹಿಡಿಯಿತು. ಗ್ರಾಮಸ್ಥರ ಪ್ರಕಾರ, ಗುಂಪೊಂದು ಏಕಾಏಕಿ ಗ್ರಾಮದೊಳಕ್ಕೆ ನುಗ್ಗಿ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ' ಎಂದು ಘಟನಾ ಸ್ಥಳಕ್ಕೆ ತೆರಳಿದ್ದ ಎಸ್‌ಪಿ ಅಭಿನವ್ ಧಿಮನ್ ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಇನ್ನು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಸ್ಥಳದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ತುಕಡಿಗಳನ್ನುನಿಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.