ಲಖನೌ: 30 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರದ್ದು ಎನ್ನಲಾದ ಅಸ್ಥಿಪಂಜರ, ಅವರ ಮನೆಯ ಹಿತ್ತಲಿನಲ್ಲಿ ಪತ್ತೆಯಾಗಿದೆ.
ಹಾಥರಸ್ ಜಿಲ್ಲೆಯ ಗಿರ್ಲೋದಪುರ ಗ್ರಾಮದ ಬುದ್ಧಸಿಂಗ್ 1994ರಲ್ಲಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಹಾಗೂ ಸಂಬಂಧಿಕರು, ಅವರ ಪತ್ತೆಗಾಗಿ ನಡೆಸಿದ್ದ ಪ್ರಯತ್ನಗಳು ಫಲ ನೀಡಿರಲಿಲ್ಲ.
ಬುದ್ಧಸಿಂಗ್ ಅವರು ಸನ್ಯಾಸ ಸ್ವೀಕರಿಸಿ, ಯಾವುದೋ ಒಂದು ಆಶ್ರಮದಲ್ಲಿ ಇದ್ದಿರಬಹುದು ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ, ಈಗ ಬುದ್ಧಸಿಂಗ್ ಅವರದ್ದು ಎನ್ನಲಾಗುತ್ತಿರುವ ಅಸ್ಥಿಪಂಜರ ಪತ್ತೆಯಾಗಿರುವುದು ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಆಘಾತ ತಂದಿದೆ.
ಬುದ್ಧಸಿಂಗ್ ಅವರನ್ನು ಅವರ ಮಕ್ಕಳೇ ಹತ್ಯೆ ಮಾಡಿ, ಮನೆ ಹಿತ್ತಲಲ್ಲಿ ಹೂತಿದ್ದರು ಎಂದು ಹೇಳಲಾಗುತ್ತಿದೆ.
ಸಿಂಗ್ ಅವರು ನಾಪತ್ತೆಯಾದಾಗ, ಕಿರಿಯ ಮಗ ಪಂಜಾಬಿ ಸಿಂಗ್ ಅವರಿಗೆ 9 ವರ್ಷ. ಇತ್ತೀಚೆಗೆ ಪೊಲೀಸರನ್ನು ಭೇಟಿ ಮಾಡಿದ್ದ ಪಂಜಾಬಿ ಸಿಂಗ್, 'ನನ್ನ ಇಬ್ಬರು ಅಣ್ಣಂದಿರೇ ತಂದೆಯನ್ನು ಕೊಂದಿದ್ದು, ಮೃತದೇಹವನ್ನು ಮನೆ ಹಿತ್ತಲಿನಲ್ಲಿ ಹೂತಿದ್ದರು. ಈ ಬಗ್ಗೆ ಬಾಯಿ ಬಿಡದಂತೆ ನನಗೆ ಬೆದರಿಕೆ ಹಾಕಿದ್ದರು' ಎಂದು ತಿಳಿಸಿದ್ದಾರೆ.
'ತಂದೆಯ ಹತ್ಯೆ ನಡೆದ ದಿನಾಂಕ ನನಗೆ ನೆನಪಿಲ್ಲ. ಅವರನ್ನು 1994ರಲ್ಲಿ ಹತ್ಯೆ ಮಾಡಲಾಗಿತ್ತು' ಎಂದು ಪೊಲೀಸರಿಗೆ ತಿಳಿಸಿದ್ದ ಪಂಜಾಬಿ ಸಿಂಗ್, 'ಮನೆಯ ಹಿತ್ತಲಿನಲ್ಲಿ ಶವ ಹೂತಿದ್ದ ನೆನಪಿದೆ' ಎಂಬ ಮಾಹಿತಿ ನೀಡಿದ್ದಾರೆ.
ಪೊಲೀಸರು, ಪಂಜಾಬಿ ಸಿಂಗ್ ಮನೆಯ ಹಿತ್ತಲಿನಲ್ಲಿ ಸುಮಾರು 15 ಅಡಿಗಳಷ್ಟು ಅಗೆದಾಗ, ಅಸ್ಥಿಪಂಜರ ಸಿಕ್ಕಿದೆ ಎಂದು ಮೂಲಗಳು ಹೇಳಿವೆ.
'ವಶಪಡಿಸಿಕೊಂಡಿರುವ ಅಸ್ಥಿಪಂಜರ ಬುದ್ಧ ಸಿಂಗ್ ಅವರದ್ದೇ ಎಂಬುದನ್ನು ದೃಢಪಡಿಸುವುದಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗುವುದು. ಈ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ' ಎಂದು ಹಾಥರಸ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ಶುಕ್ರವಾರ ತಿಳಿಸಿದ್ದಾರೆ.