ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ತತ್ತರಿಸಿದ್ದು, ಒಟ್ಟು 31 ಜನರು ಮೃತಪಟ್ಟಿದ್ದಾರೆ.
ಪ್ರವಾಹದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡೂ ರಾಜ್ಯಗಳ ಹಲವೆಡೆ ರಸ್ತೆ ಮತ್ತು ರೈಲು ಸಂಪರ್ಕಗಳು ಕಡಿತವಾಗಿದ್ದು, ಸಹಸ್ರಾರು ಎಕರೆ ಕೃಷಿ ಪ್ರದೇಶ ಜಲಾವೃತವಾಗಿದೆ.
ಮಳೆ ಸಂಬಂಧ ಅವಘಡಗಳಿಂದ ಆಂಧ್ರಪ್ರದೇಶದಲ್ಲಿ 15 ಮತ್ತು ತೆಲಂಗಾಣದಲ್ಲಿ 16 ಮಂದಿ ಅಸುನೀಗಿದ್ದಾರೆ. ಹಲವೆಡೆ ರೈಲ್ವೆ ಹಳಿಗಳು ಕಿತ್ತು ಹೋಗಿವೆ. ಹಳಿಗಳ ಕೆಳಗಿನ ಜಲ್ಲಿಕಲ್ಲುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಸೇತುವೆಗಳು ಕುಸಿದು ಬಿದ್ದಿವೆ.
ಪ್ರಕಾಶಂ ಬ್ಯಾರೆಜ್‌ನಿಂದ ಸೋಮವಾರ ಬೆಳಿಗ್ಗೆ 8 ಗಂಟೆಯ ವೇಳೆಗೆ 11.3 ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ. ಇದು ಪ್ರವಾಹದ ತೀವ್ರತೆಯನ್ನು ಹೆಚ್ಚಿಸಿದೆ.
ತೊಂದರೆ ಸಿಲುಕಿರುವ 4.5 ಲಕ್ಷ ಜನ:
ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯಿಂದ 4.5 ಲಕ್ಷ ಜನರು ತೊಂದರೆಗೆ ಸಿಲುಕಿದ್ದು, ವಿವಿಧೆಡೆ ತೆರೆದಿರುವ 166 ಕಾಳಜಿ ಕೇಂದ್ರಗಳಿಗೆ 31,238 ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದ ಎನ್‌ಟಿಆರ್, ಗುಂಟೂರು, ಕೃಷ್ಣಾ, ಏಲೂರು, ಪಲ್ನಾಡು, ಬಾಪಟ್ಲ, ಪ್ರಕಾಶಂ ಜಿಲ್ಲೆಗಳಲ್ಲಿ ತೀವ್ರ ಹಾನಿಯಾಗಿದೆ ಎಂದು ಆಂಧ್ರ ಸರ್ಕಾರ ಸೋಮವಾರ ತಿಳಿಸಿದೆ.
ಎಸ್‌ಡಿಆರ್‌ಎಫ್‌ನ 20, ಎನ್‌ಡಿಆರ್‌ಎಫ್‌ನ 19 ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಗುಂಟೂರು ಮತ್ತು ಎನ್‌ಟಿಆರ್ ಜಿಲ್ಲೆಗಳಲ್ಲಿ ಭಾರತೀಯ ನೌಕಾಪಡೆಯು ಎರಡು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಕ್ಕಿಳಿದಿವೆ. ಪ್ರವಾಹ ಪೀಡಿತ ಮತ್ತು ಮುಳಗಡೆ ಪ್ರದೇಶದಲ್ಲಿ ಸಿಲುಕಿರುವವರ ರಕ್ಷಣೆಗೆ ಮತ್ತು ಪರಿಹಾರ ಸಾಮಗ್ರಿಗಳನ್ನು ವಿತರಿಸಲು ಇನ್ನೂ ಆರು ಹೆಲಿಕಾಪ್ಟರ್‌ಗಳನ್ನು ಒದಗಿಸುವಂತೆ ಆಂಧ್ರ ಸರ್ಕಾರ ಕೋರಿದೆ.
ರಾಷ್ಟ್ರೀಯ ವಿಪತ್ತು ಘೋಷಿಸಲು ಆಗ್ರಹ:
ಮಳೆ ಸಂಬಂಧಿ ಅವಘಡಗಳಲ್ಲಿ ತೆಲಂಗಾಣ ರಾಜ್ಯದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಸಾಕಷ್ಟು ಜೀವ ಹಾನಿ ಮತ್ತು ಅಪಾರ ಪ್ರಮಾಣದ ಆಸ್ತಿ, ಬೆಳೆ ನಷ್ಟವಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಳೆಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಸಮಗ್ರ ವರದಿಯನ್ನು ಕೇಂದ್ರಕ್ಕೆ ಶೀಘ್ರವೇ ಸಲ್ಲಿಸಲಾಗುವುದು ಎಂದಿದ್ದಾರೆ.
ಪ್ರಮುಖಾಂಶಗಳು
* ಮಳೆಯಿಂದ ಆಂಧ್ರ ಪ್ರದೇಶದ ವಿಜಯವಾಡ ನಗರ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ವಿಜಯವಾಡದ ಮೊಗಲ್ರಾಜಪುರಂನಲ್ಲಿ ಭೂಕುಸಿತ ಸಂಭವಿಸಿ ಐವರು ಮೃತಪಟ್ಟಿದ್ದಾರೆ. * ರಕ್ಷಣಾ ಕಾರ್ಯಾಚರಣೆ ಮತ್ತು ಆಹಾರ ಸಾಮಗ್ರಿಗಳ ವಿತರಣೆ ಬಗ್ಗೆ ವಿಜಯವಾಡದ ಅಜಿತ್ ನಗರದ ನಿವಾಸಿಗಳು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ಮೂರು ದಿನಗಳಿಂದ ನೀರಿನಲ್ಲಿ ಸಿಲುಕಿ ತಾವು ಅನುಭವಿಸಿದ ನರಕಯಾತನೆಯನ್ನು ಅವರು ಮುಖ್ಯಮಂತ್ರಿ ಬಳಿ ಹೇಳಿ ಕಣ್ಣೀರಾಕಿದ್ದಾರೆ. * ಆಂಧ್ರಪ್ರದೇಶ ತೆಲಂಗಾಣದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಸಂಘಮಿತ್ರ ಎಕ್ಸ್‌ಪ್ರೆಸ್ (ಬೆಂಗಳೂರು-ದಾನಾಪುರ ಮತ್ತು ದಾನಾಪುರ- ಬೆಂಗಳೂರು) ಸಂಚಾರವನ್ನು ರದ್ದುಗೊಳಿಸಿರುವುದಾಗಿ ಪೂರ್ವ ಮಧ್ಯ ರೈಲ್ವೆ ತಿಳಿಸಿದೆ. * ಮಹಾರಾಷ್ಟ್ರದ ಮರಾಠವಾಡದಲ್ಲಿ ಭಾರಿ ಮಳೆಯಾಗಿದ್ದು (31.4 ಸೆಂ.ಮೀ) ನಾಲ್ವರು ಮೃತಪಟ್ಟಿದ್ದಾರೆ. ಸುಮಾರು 63 ಗ್ರಾಮಗಳ ಜನರು ತೊಂದರೆಗೆ ಸಿಲುಕಿದ್ದಾರೆ.
₹ 5000 ಕೋಟಿ ನಷ್ಟ
ಪ್ರಾಥಮಿಕ ಅಂದಾಜಿನ ಪ್ರಕಾರ ಮಳೆಯಿಂದಾಗಿ ತೆಲಂಗಾಣ ರಾಜ್ಯದಲ್ಲಿ ಸುಮಾರು ₹ 5000 ಕೋಟಿಯಷ್ಟು ಹಾನಿ ಸಂಭವಿಸಿದೆ. ಈ ಪೈಕಿ ತುರ್ತಾಗಿ ₹ 2000 ಕೋಟಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ರೇವಂತ್ ರೆಡ್ಡಿ ತಿಳಿಸಿದ್ದಾರೆ. ರಾಜ್ಯದ ಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 432 ರೈಲು ಸಂಚಾರ ರದ್ದು: ಭಾರಿ ಮಳೆ ಪ್ರವಾಹ ಮತ್ತು ರೈಲ್ವೆ ಹಳಿಗಳ ಮೇಲೆ ನೀರು ನಿಂತ ಪರಿಣಾಮ 432 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು 13 ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಸೋಮವಾರ ಮಧ್ಯಾಹ್ನದವರೆಗೆ 139 ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.