ಮುಂಬೈ: ವಾಣಿಜ್ಯ ನಗರಿ ಮುಂಬೈ ಜನತೆ ಈ ಬಾರಿ ತಮ್ಮ ನೆಚ್ಚಿನ ಗಣೇಶನಿಗೆ ಅದ್ದೂರಿ ವಿದಾಯ ಹೇಳಿದ್ದು, ಬುಧವಾರ ಬೆಳಿಗ್ಗೆ ನಗರಾದ್ಯಂತ 37,000 ಕ್ಕೂ ಹೆಚ್ಚು ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣೇಶ ಹಬ್ಬದ ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ ಆರಂಭವಾದ ವಿಸರ್ಜನೆ ಮೆರವಣಿಗೆಗಳು ರಾತ್ರಿಯಿಡೀ ಸುಗಮವಾಗಿ ನಡೆದಿದ್ದು, ನಗರದ ಕಡಲತೀರಗಳು, ಕೆರೆಗಳು ಮತ್ತು ಕೃತಕ ಕೊಳಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.
ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿದ್ದ ಲಾಲ್‌ಬಾಗ್ ಚಾ ರಾಜ ಗಣೇಶನ ಮೂರ್ತಿಯನ್ನು ದಕ್ಷಿಣ ಮುಂಬೈನ ಗಿರ್‌ಗಾಂವ್ ಬೀಚ್‌ನಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಅರಬ್ಬಿ ಸಮುದ್ರದಲ್ಲಿ ಮುಳುಗಿಸಲಾಯಿತು. ದೇವರ ದರ್ಶನಕ್ಕಾಗಿ ಸಾವಿರಾರು ಜನರು ಹರಸಾಹಸಪಟ್ಟರು.
ಚಿಂಚ್ಪೋಕ್ಲಿಚಾ ಚಿಂತಾಮಣಿ, ಲಾಲ್ ಬಾಗ್ ನ ಮತ್ತೊಂದು ಪ್ರಸಿದ್ಧ ಗಣೇಶ ಮಂಡಲ ಮತ್ತು ಇತರ ಕೆಲವು ಮೂರ್ತಿಗಳನ್ನು ಸಹ ಸಮುದ್ರತೀರದಲ್ಲಿ ವಿಸರ್ಜಿಸಲಾಯಿತು. ಗಿರ್ಗಾಂವ್, ದಾದರ್, ಜುಹು, ಮಾರ್ವೆ ಮತ್ತು ಅಕ್ಸಾ ಕಡಲತೀರಗಳು, ಕೃತಕ ಕೊಳಗಳು ಮತ್ತಿತರ ಕಡೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆಯಿತು.
ಬುಧವಾರ ಬೆಳಗ್ಗೆ 6 ಗಂಟೆ ವೇಳೆಗೆ ಮುಂಬೈನ ವಿವಿಧ ಕಡೆಗಳಲ್ಲಿ ಒಟ್ಟು 37,064 ಗಣೇಶ ಮತ್ತು ಗೌರಿಯ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಇವುಗಳಲ್ಲಿ 5,762 'ಸಾರ್ವಜನಿಕ' (ಸಮುದಾಯ ಗುಂಪುಗಳು) ಮೂರ್ತಿಗಳು ಸೇರಿವೆ. ಒಟ್ಟು 11,713 ಮೂರ್ತಿಗಳನ್ನು ಕೃತಕವಾಗಿ ನಿರ್ಮಾಣ ಮಾಡಲಾದ ಕೊಳಗಳಲ್ಲಿ ಮುಳುಗಿಸಲಾಗಿದೆ. ನಗರದಾದ್ಯಂತ ಕೊಳಗಳನ್ನು ಸ್ಥಾಪಿಸಲಾಗಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದರು.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸಾವಿರಾರು ಸಿಬ್ಬಂದಿ, ಜೀವರಕ್ಷಕರು ಮತ್ತು ತುರ್ತು ಸೇವೆಗಳನ್ನು ನಿಯೋಜಿಸುವ ಮೂಲಕ ಸುಗಮ ವಿಸರ್ಜನೆಗೆ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 7 ರಂದು ಪ್ರಾರಂಭವಾದ ಗಣೇಶೋತ್ಸವ ಸೆಪ್ಟೆಂಬರ್ 17 ರಂದು ಮುಕ್ತಾಯವಾಯಿತು.