ನವದೆಹಲಿ: ತನ್ನ ಪ್ರಮುಖ ಕಾರ್ಯಸೂಚಿಯಾದ 'ಒಂದು ದೇಶ-ಒಂದು ಚುನಾವಣೆ' ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ಮೂರು ಮಸೂದೆಗಳ ಮಂಡನೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ.
ಈ ಯೋಜನೆ ಅನುಷ್ಠಾನಕ್ಕಾಗಿ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ಎರಡು ಮಸೂದೆಗಳು ಸೇರಿ ಒಟ್ಟು ಮೂರು ಮಸೂದೆಗಳನ್ನು ಮಂಡಿಸಲು ನಿರ್ಧರಿಸಿದೆ.
ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಸಮಿತಿ ಏಕಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಶಿಫಾರಸುಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈಗ, ಶಿಫಾರಸುಗಳ ಜಾರಿಗೆ ಮುಂದಡಿ ಇಟ್ಟಿದೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದು ಉದ್ದೇಶಿತ ಮಸೂದೆಗಳಲ್ಲೊಂದು. ಈ ಮಸೂದೆ ಅಂಗೀಕಾರಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ.
ಉದ್ದೇಶಿತ ತಿದ್ದುಪಡಿಗಳು: ಈ ತಿದ್ದುಪಡಿಯು ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದಕ್ಕೆ ಸಂಬಂಧಿಸಿದ್ದಾಗಿದೆ. ಸಂವಿಧಾನದ 82ಎ ವಿಧಿಗೆ ಉಪ ಕಲಂ (1) ಸೇರ್ಪಡೆ ಮಾಡುವುದನ್ನು ಈ ಉದ್ದೇಶಿತ ಮಸೂದೆ ಒಳಗೊಂಡಿದೆ. ಈ ಉಪ ಕಲಂ (1), ಯೋಜನೆ ಯಾವಾಗಿನಿಂದ ಜಾರಿಗೆ ಬಂದಿದೆ ಎಂಬುದನ್ನು ವಿವರಿಸುತ್ತದೆ. ಅದೇ ರೀತಿ, ಲೋಕಸಭೆ ಮತ್ತು ವಿಧಾನಸಭೆಗಳ ಅವಧಿಯು ಯಾವಾಗ ಅಂತ್ಯಗೊಳ್ಳಲಿದೆ ಎಂಬುದನ್ನು ಸೂಚಿಸುವ ಉಪ ಕಲಂ (2) ಅನ್ನು ಕೂಡ ಈ ವಿಧಿಗೆ ಸೇರ್ಪಡೆ ಮಾಡುವ ಅಂಶವನ್ನೂ ಒಳಗೊಂಡಿದೆ. ಈ ಎರಡು ಉಪ ಕಲಂಗಳ ಸೇರ್ಪಡೆ ಕುರಿತು ಉನ್ನತ ಸಮಿತಿ ಶಿಫಾರಸು ಮಾಡಿದೆ. ಸಂವಿಧಾನದ 83(2) ವಿಧಿಗೆ ತಿದ್ದುಪಡಿ ತಂದು, ಅದಕ್ಕೆ, ಉಪ ಕಲಂ (3) ಹಾಗೂ (4) ಸೇರ್ಪಡೆ ಮಾಡುವುದು. ಈ ಉಪ ಕಲಂ ಗಳು ಲೋಕಸಭೆಯ ಅವಧಿ ಹಾಗೂ ಅದರ ವಿಸರ್ಜನೆ ಕುರಿತು ವಿವರಿಸುತ್ತವೆ. ಇನ್ನು, ವಿಧಾನಸಭೆಗಳ ವಿಸರ್ಜನೆಗೆ ಸಂಬಂಧಿಸಿದ ಅವಕಾಶಗಳನ್ನು ಕೂಡ ಈ ತಿದ್ದುಪಡಿ ಒಳಗೊಂಡಿದೆ. ಇದರ ಜೊತೆ, 'ಏಕಕಾಲಿಕ ಚುನಾವಣೆಗಳು' ಎಂಬ ಪದ ಸೇರ್ಪಡೆಗೆ ಅನುವು ಮಾಡಿ ಕೊಡಲು, 327ನೇ ವಿಧಿಗೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಒಳಗೊಂಡಿದೆ. ಈ ಮಸೂದೆ ಅಂಗೀಕಾರಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆಯ ಅಗತ್ಯವಿಲ್ಲ ಎಂದು ಸಮಿತಿಯ ಶಿಫಾರಸು ಹೇಳುತ್ತದೆ.ಮೊದಲನೇ ತಿದ್ದುಪಡಿಈ ತಿದ್ದುಪಡಿಯು ರಾಜ್ಯಗಳ ವಿದ್ಯಮಾನಗಳಿಗೆ ಸಂಬಂಧಿಸಿದ್ದರಿಂದ, ಇದಕ್ಕೆ ಕನಿಷ್ಠ ಶೇ 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ ಎಂದು ಸಮಿತಿ ಹೇಳಿದೆ. ಈ ತಿದ್ದುಪಡಿಯು, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕಾಗಿ, ಚುನಾವಣಾ ಆಯೋಗವು (ಇ.ಸಿ) ರಾಜ್ಯ ಚುನಾವಣಾ ಆಯೋಗಗಳ (ಎಸ್.ಇ.ಸಿ) ಜೊತೆ ಸಮಾಲೋಚನೆ ನಡೆಸಿ, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವ ಅವಕಾಶಗಳಿಗೆ ಸಂಬಂಧಿಸಿದ್ದಾಗಿದೆ. ಸಾಂವಿಧಾನಿಕವಾಗಿ ಕೇಂದ್ರ ಚುನಾವಣಾ ಆಯೋಗ (ಇ.ಸಿ) ಮತ್ತು ರಾಜ್ಯ ಚುನಾವಣಾ ಆಯೋಗಗಳು (ಎಸ್.ಇ.ಸಿ) ಪ್ರತ್ಯೇಕ ಸಂಸ್ಥೆಗಳಾಗಿವೆ. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಸ್ಥಾನ, ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವುದು ಕೇಂದ್ರ ಚುನಾವಣಾ ಆಯೋಗದ ಜವಾಬ್ದಾರಿ. ಇನ್ನು, ಮುನ್ಸಿಪಾಲಿಟಿಗಳು, ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಹೊಣೆ ಎಸ್.ಇ.ಸಿಗಳದ್ದು. ಹೀಗಾಗಿ, ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯು, ಲೋಕಸಭೆ ಮತ್ತು ವಿಧಾನಸಭೆಗಳ ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ, ಹೊಸದಾಗಿ 324ಎ ವಿಧಿಯನ್ನು ಸೇರ್ಪಡೆ ಮಾಡಲಾಗುತ್ತದೆ.ಎರಡನೇ ತಿದ್ದುಪಡಿಇದು ಸಾಮಾನ್ಯ ತಿದ್ದುಪಡಿಯಾಗಿದ್ದು, ಈ ಮಸೂದೆಯು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ದೆಹಲಿ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭೆಗಳಿಗೆ ಸಂಬಂಧಿಸಿದ್ದಾಗಿದೆ. ಈ ಮೂರು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಅವಧಿಗಳನ್ನು ಇತರ ರಾಜ್ಯಗಳ ಶಾಸನಸಭೆಗಳು ಮತ್ತು ಲೋಕಸಭೆಯ ಅವಧಿಯೊಂದಿಗೆ ಸಮೀಕರಿಸುವುದಾಗಿದೆ. ಇದಕ್ಕಾಗಿ, ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ಕಾಯ್ದೆ-1991, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ-1963 ಹಾಗೂ ಜಮ್ಮು-ಕಾಶ್ಮೀರ ಪುನರ್‌ರಚನೆ ಕಾಯ್ದೆ-2019ಕ್ಕೆ ತಿದ್ದುಪಡಿ ತರುವುದು ಅಗತ್ಯ. ಉದ್ದೇಶಿತ ಈ ಮಸೂದೆಯು ಸಾಮಾನ್ಯ ಮಸೂದೆಯಾಗಿರುವ ಕಾರಣ ಇದಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೇ, ರಾಜ್ಯಗಳ ಒಪ್ಪಿಗೆಯೂ ಬೇಕಾಗುವುದಿಲ್ಲ