ತಿರುಪತಿ : ತಿರುಮಲ ತಿರುಪತಿ ದೇವಸ್ಥಾನದ ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದಲ್ಲಿ ಕಲಬೆರಕೆ ಆರೋಪ ಕೇಳಿ ಬಂದಿರುವುದರ ಹೊರತಾಗಿಯೂ, ಲಾಡು ಮಾರಾಟದ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ.
ದೇವಸ್ಥಾನಕ್ಕೆ ಪ್ರತಿದಿನ 60,000 ಭಕ್ತರು ಭೇಟಿ ನೀಡುತ್ತಾರೆ.
ತಿರುಪತಿಯಲ್ಲಿ ಪ್ರಸಾದ ರೂಪದಲ್ಲಿ ನಿತ್ಯವೂ ಸರಾಸರಿ 3.5 ಲಕ್ಷ ಲಾಡು ಮಾರಾಟವಾಗುತ್ತವೆ. ಕಳೆದ ನಾಲ್ಕು ದಿನದಲ್ಲಿ ಮಾರಾಟವಾಗಿರುವ ಲಾಡುಗಳ ಸರಾಸರಿಯೂ ಅದಕ್ಕೆ ಸರಿಸಮನಾಗಿಯೇ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
'ನಮ್ಮ ಭಕ್ತಿಯು, ಯಾರಿಂದಲೂ ಅಲುಗಾಡಿಸಲಾಗದಷ್ಟು ಬಲವಾಗಿದೆ' ಎಂದು ವೆಂಕಟೇಶ್ವರ ರಾವ್ ಎಂಬ ಭಕ್ತರೊಬ್ಬರು ಹೇಳಿರುವುದಾಗಿ ಬರೆಯಲಾಗಿದೆ.
ತಿರುಪತಿಯಲ್ಲಿ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಲಾಡು ತಯಾರಿಸಲಾಗುತ್ತದೆ. ಅದಕ್ಕಾಗಿ ಸುಮಾರು 15 ಟನ್‌ನಷ್ಟು ಹಸುವಿನ ತುಪ್ಪ ಬಳಸಲಾಗುತ್ತದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು, ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ತಿರುಪತಿ ಲಾಡು ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಇತ್ತೀಚೆಗೆ ಆರೋಪಿಸಿದ್ದರು. ಅದಾದ ಬಳಿಕ ಈ ವಿಚಾರ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಆದರೆ, ಈ ಆರೋಪವನ್ನು ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿ ಅಲ್ಲಗಳೆದಿದ್ದರು.
ಏತನ್ಮಧ್ಯೆ, ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಕಾರ್ಯನಿರ್ವಹಣಾಧಿಕಾರಿ ಜೆ.ಶ್ಯಾಮಲಾ ರಾವ್ ಅವರು, 'ನಾಲ್ಕು ಗಂಟೆ ಕಾಲ ಶುದ್ಧೀಕರಣ ಹೋಮ ನಡೆಸಿ ಪ್ರಸಾದದ ಪಾವಿತ್ರ್ಯತೆಯನ್ನು ಪುನಃಸ್ಥಾಪಿಸಲಾಗಿದೆ. ಭಕ್ತರು ಲಾಡು ಕುರಿತು ಆತಂಕಪಡಬೇಕಿಲ್ಲ' ಎಂದು ಹೇಳಿದ್ದಾರೆ.