ಡೀರ್ ಅಲ್ ಬಲಾಹ್: ಯುದ್ಧ ಬಾಧಿತ ಗಾಜಾಪಟ್ಟಿಯಿಂದ ಗುಳೆ ಹೋಗಿದ್ದ, ನಿರಾಶ್ರಿತ ಪ್ಯಾಲೆಸ್ಟೀನಿಯರು ನೆಲೆಯೂರಿದ್ದ ಬಿಡಾರದ ಮೇಲೆ ಇಸ್ರೇಲ್ ಸೇನೆ ವಾಯುದಾಳಿ ನಡೆಸಿದ್ದು, ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ.
'ಗಾಜಾಪಟ್ಟಿಯ ಮವಾಸಿ ಖಾನ್ ಯೂನಿಸ್ ನಗರದಲ್ಲಿ, ಜನದಟ್ಟಣೆಯಿದ್ದ ಬಿಡಾರದ ಮೇಲೆ ಮಂಗಳವಾರ ಬೆಳಗಿನ ಜಾವ ದಾಳಿ ನಡೆದಿದೆ.
ಕನಿಷ್ಠ 60 ಮಂದಿ ಗಾಯಗೊಂಡಿದ್ದಾರೆ' ಎಂದು ಪ್ಯಾಲೆಸ್ಟೀನ್ ಅಧಿಕಾರಿಗಳು ಹೇಳಿದ್ದಾರೆ.
ನಲವತ್ತು ಮಂದಿ ಸತ್ತಿದ್ದಾರೆ ಎಂಬ ಹೇಳಿಕೆಯನ್ನು ತಳ್ಳಿಹಾಕಿರುವ ಇಸ್ರೇಲ್‌ನ ಸೇನೆಯು, ತಾನು ಹಮಾಸ್‌ನ ಬಂಡುಕೋರರನ್ನು ಗುರಿಯಾಗಿಸಿ ಈ ದಾಳಿ ನಡೆಸಿದ್ದಾಗಿ ಸ್ಪಷ್ಟಪಡಿಸಿದೆ.
ಗಾಜಾ ಪಟ್ಟಿಗೆ ಹೊಂದಿಕೊಂಡಂತೆ ಇದ್ದ ಈ ಬಿಡಾರದ ಮೇಲೆ ನಡೆದ ದಾಳಿ ಭೀಕರ ಸ್ವರೂಪದ್ದಾಗಿದೆ. ಸಾವಿರಾರು ನಾಗರಿಕರು ನೆಲೆಯೂರಿದ್ದ ಸ್ಥಳವನ್ನೇ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
ಗಾಜಾದ ರಕ್ಷಣಾ ಇಲಾಖೆಯು, 'ದಾಳಿ ಸ್ಥಳದಿಂದ 40 ಶವಗಳನ್ನು ಪತ್ತೆ ಮಾಡಲಾಗಿದೆ. ನಾಪತ್ತೆ ಆದವರಿಗಾಗಿ ಶೋಧ ನಡೆದಿದೆ. ಬಿಡಾರದಲ್ಲಿದ್ದ ಇಡೀ ಕುಟುಂಬಗಳೇ ನಾಶವಾಗಿವೆ' ಎಂದು ತಿಳಿಸಿದೆ.