ಬದಿಯಡ್ಕ: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ 40ನೇ ವಾರ್ಷಿಕ ಮಹಾಸಭೆ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರದ ಸಭಾ ಭವನದಲ್ಲಿ ಶನಿವಾರ ಜರಗಿತು. ಎಕೆಪಿಎ ಕುಂಬಳೆ ವಲಯ ಉಪಾಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ದೀಪಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಛಾಯಾಗ್ರಹಣ ರಂಗವು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮುಂದುವರಿಯಬೇಕಾಗಿದೆ. ಆನ್‍ಲೈನ್ ವ್ಯವಸ್ಥೆಯು ನಮ್ಮ ಉದ್ಯಮಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ದೊಡ್ಡ ಮೊತ್ತದ ಹಣವನ್ನು ವ್ಯಯಿಸಿ ಕ್ಯಾಮರಾ ಹಾಗೂ ಇನ್ನಿತರ ಅನುಬಂಧ ಸಾಮಾಗ್ರಿಗಳನ್ನು ಖರೀದಿಸಿದ ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದಾರೆ ಎಂದರು.
ಎಕೆಪಿಎ ಬದಿಯಡ್ಕ ಘಟಕದ ಅಧ್ಯಕ್ಷ ಶ್ಯಾಮಪ್ರಸಾದ ಸರಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘಟನೆಯು ಬೆಳೆಯಬೇಕಾದರೆ ಸದಸ್ಯರ ಸಹಭಾಗಿತ್ವ ಅಗತ್ಯ ಎಂದರು.
ಎಕೆಪಿಎ ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು, ಕಾಸರಗೋಡು ಜಿಲ್ಲಾ ಅಧ್ಯಕ್ಷ ಕೆ.ಸಿ.ಅಬ್ರಹಾಂ, ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ., ಜಿಲ್ಲಾ ಸಮಿತಿ ಸದಸ್ಯರುಗಳಾದ ವಿಜಯನ್ ಶೃಂಗಾರ್, ವೇಣುಗೋಪಾಲ ಎ., ಕುಂಬಳೆ ವಲಯ ಕಾರ್ಯದರ್ಶಿ ನಿತ್ಯಪ್ರಸಾದ್, ಬದಿಯಡ್ಕ ಘಟಕ ಇನ್‍ಚಾರ್ಜ್ ಸುರೇಶ್ ಆಚಾರ್ಯ ಪಾಲ್ಗೊಂಡು ಮಾತನಾಡಿದರು. ಬದಿಯಡ್ಕ ಘಟಕ ಕಾರ್ಯದರ್ಶಿ ಬಾಲಕೃಷ್ಣ ನಿಡುಗಳ ವಾರ್ಷಿಕ ವರದಿ, ಕೋಶಾಧಿಕಾರಿ ನಾರಾಯಣ ವೋಡಂಗಲ್ಲು ಲೆಕ್ಕಪತ್ರ ಮಂಡಿಸಿದರು. ಬದಿಯಡ್ಕ ಘಟಕದ ಸೀತಾಂಗೋಳಿ, ನೀರ್ಚಾಲು, ಪೆರ್ಲ, ಅಡ್ಯನಡ್ಕ, ಬದಿಯಡ್ಕ, ನಾರಂಪಾಡಿಯಿಂದ ಸದಸ್ಯರು ಪಾಲ್ಗೊಂಡಿದ್ದರು.
ಅಭಿಮತ: ಡಿಜಿಟಲ್ ಯುಗದಲ್ಲಿ ಬಂದ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕಂಪ್ಯೂಟರ್ ಮೂಲಕ ಛಾಯಾಗ್ರಹಣವು ಸಂಚರಿಸುತ್ತಿದ್ದು ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಬೇಕಾಗಿದೆ. ಸಂಘಟನೆಗೆ ಪೂರಕವಾಗಿ ಸಾಮಾಜಿಕ ರಂಗದಲ್ಲೂ ಪಾಲ್ಗೊಂಡು ಜನರೊಂದಿಗೆ ಬೆರೆತು ನಮ್ಮ ಕರ್ತವ್ಯವನ್ನು ಮೆರೆಯಬೇಕು.
- ಹರೀಶ್ ಪಾಲಕುನ್ನು, ರಾಜ್ಯ ಸಮಿತಿ ಕಾರ್ಯದರ್ಶಿ