ಕೀವ್: ಉಕ್ರೇನ್‌ನ ಮಧ್ಯ-ಪೂರ್ವ ಪ್ರದೇಶದ ಪೋಲ್ಟವಾ ನಗರದಲ್ಲಿ ಶೈಕ್ಷಣಿಕ ಸಂಸ್ಥೆ ಮತ್ತು ಹತ್ತಿರದ ಆಸ್ಪತ್ರೆಯ ಮೇಲೆ ರಷ್ಯಾ ಎರಡು ಗುರಿ ನಿರ್ದೇಶಿತ (ಬ್ಯಾಲೆಸ್ಟಿಕ್) ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಇದರಿಂದ 41 ಜನರು ಮೃತಪಟ್ಟಿದ್ದು 180 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಂಗಳವಾರ ಹೇಳಿದ್ದಾರೆ.
2022ರ ಫೆಬ್ರುವರಿ 24ರಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಉಕ್ರೇನ್ ಮೇಲೆ ನಡೆಸಿರುವ ದಾಳಿಗಳಲ್ಲಿ ಇದು ಕೂಡ ಅತ್ಯಂತ ಭೀಕರ ದಾಳಿ ಎನಿಸಿದೆ.
'ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ಸ್‌ನ ಕಟ್ಟಡವೊಂದು ಭಾಗಶಃ ನಾಶವಾಗಿದೆ. ಜನರು ಅವಶೇಷಗಳಡಿ ಸಿಲುಕಿದ್ದರು. ಇದರಲ್ಲಿ ಹಲವು ಮಂದಿಯನ್ನು ರಕ್ಷಣಾ ತಂಡಗಳು ರಕ್ಷಿಸಿವೆ' ಎಂದು ಝೆಲೆನ್‌ಸ್ಕಿ ಟೆಲಿಗ್ರಾಂ ಚಾನೆಲ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.
ವೈಮಾನಿಕ ದಾಳಿಯ ಎಚ್ಚರಿಕೆ ನೀಡಿದ ಸ್ವಲ್ಪ ಸಮಯದಲ್ಲೇ ಕ್ಷಿಪಣಿಗಳು ಅಪ್ಪಳಿಸಿದವು. ಆಗ ಜನರು ಬಾಂಬ್ ಶೆಲ್ಟರ್‌ಗಳಿಗೆ ಹೋಗುತ್ತಿದ್ದರು. ಇದೊಂದು ಅನಾಗರಿಕ ದಾಳಿ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಹೇಳಿದೆ.
ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ 11 ಮಂದಿ ಸೇರಿ 25 ಜನರನ್ನು ರಕ್ಷಣಾ ಸಿಬ್ಬಂದಿ ಮತ್ತು ವೈದ್ಯಕೀಯ ತಂಡದವರು ರಕ್ಷಿಸಿದ್ದಾರೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.