ತಿರುವನಂತಪುರಂ: ಓಣಂ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆರ್ಥಿಕ ಬಿಕ್ಕಟ್ಟು ಬಗೆಹರಿದಿದೆ. ಕೇಂದ್ರ ಸರ್ಕಾರ 4,200 ಕೋಟಿ ಸಾಲ ಪಡೆಯಲು ಅನುಮತಿ ನೀಡಿರುವುದರಿಂದ ಕೇರಳಕ್ಕೆ ಓಣಂ ಅಗತ್ಯಕ್ಕೆ ಹಣ ಲಭ್ಯವಾಗಲಿದೆ.
ನಿರ್ವಹಣಾ ವೆಚ್ಚಕ್ಕೆ ಹಣ ಮೀಸಲಿಡಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 4,200 ಕೋಟಿ ರೂ.ನೀಡಲು ಒಪ್ಪಿಗೆ ನೀಡಿದೆ. ಇದರಲ್ಲಿ 21,253 ಕೋಟಿ ರೂ.ಗಳನ್ನು ಡಿಸೆಂಬರ್ ವರೆಗೆ ಮತ್ತು ಉಳಿದ ಮೊತ್ತವನ್ನು ಜನವರಿಯಿಂದ ಮಾರ್ಚ್ ವರೆಗೆ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಕಳೆದ ಮಂಗಳವಾರದ ವೇಳೆಗೆ ರಾಜ್ಯ ಸರ್ಕಾರ 21,253 ಕೋಟಿ ರೂಪಾಯಿ ಸಾಲ ಪಡೆದಾಗ ಬಿಕ್ಕಟ್ಟು ಉಲ್ಬಣಗೊಂಡಿತು.
ಜನವರಿ-ಮಾರ್ಚ್ ಅವಧಿಯಲ್ಲಿ ಸಾಲ ಪಡೆಯಲು ಮೀಸಲಿಟ್ಟ ಮೊತ್ತದಿಂದ 5,000 ಕೋಟಿ ರೂಪಾಯಿ ಮುಂಗಡ ಸಾಲ ಪಡೆಯಲು ಕೇರಳ ಕೇಂದ್ರದ ಅನುಮತಿ ಕೋರಲಾಗಿತ್ತು. ಸದ್ಯಕ್ಕೆ 4,200 ಕೋಟಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ. ಈ ತಿಂಗಳ 10ರಂದು ಇದರಿಂದ ಅಗತ್ಯ ಮೊತ್ತದ ಸಾಲ ಪಡೆದು ನಿರ್ವಹಣಾ ವೆಚ್ಚಕ್ಕೆ ಹಣ ಸಿಗಲಿದೆ.
ವೇತನ, ಪಿಂಚಣಿ, ಬೋನಸ್, ಹಬ್ಬದ ಭತ್ಯೆ ಮತ್ತು ಕಲ್ಯಾಣ ಪಿಂಚಣಿ ಸೇರಿದಂತೆ ಓಣಂಗಾಗಿ ಸುಮಾರು 20,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಉಳಿದ ಮೊತ್ತವನ್ನು ತೆರಿಗೆ ಸೇರಿದಂತೆ ಇತರೆ ಆದಾಯದಿಂದ ಕಂಡುಕೊಳ್ಳಲಾಗುವುದು, ಕಳೆದ ವರ್ಷದಂತೆ ಈ ಬಾರಿಯೂ ಬೋನಸ್, ಹಬ್ಬದ ಭತ್ಯೆ ಸೇರಿದಂತೆ ಸವಲತ್ತುಗಳನ್ನು ನೀಡಲು ಒಪ್ಪಂದವಾಗಿದೆ. ಒಂದು ಅಥವಾ ಎರಡು ತಿಂಗಳ ಕಲ್ಯಾಣ ಪಿಂಚಣಿ ಬಾಕಿ ಪಾವತಿಸಲು ಸಹಕಾರಿ ಬ್ಯಾಂಕ್‍ನಿಂದ 1,000 ಕೋಟಿ ರೂ.ಪಡೆಯಲಾಗುವುದು.
ಇದೇ ವೇಳೆ ವಯನಾಡು ದುರಂತದಿಂದ ಸಂತ್ರಸ್ತರಾದವರ ನೆರವಿಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಸ್ಯಾಲರಿ(ವೇತನ ನೆರವು) ಚಾಲೆಂಜ್ ಘೋಷಣೆ ಮಾಡಿದ್ದರೂ ಫಲ ನೀಡಿಲ್ಲ ಎಂದು ಅಂದಾಜಿಸಲಾಗಿದೆ. ಸ್ಯಾಲರಿ ಚಾಲೆಂಜ್ ಮೂಲಕ ಸರ್ಕಾರ 500 ಕೋಟಿ ರೂ.ನಿರೀಕ್ಷಿಸಲಾಗಿತ್ತು. ಆದರೆ, ಅನಧಿಕೃತ ಅಂದಾಜಿನ ಪ್ರಕಾರ ಈ ವಿಭಾಗದಲ್ಲಿ 200 ಕೋಟಿ ರೂ.ಲಭಿಸಿದೆ. ಇದೇ ವೇಳೆ ಸಾರ್ವಜನಿಕರು ಹಾಗೂ ಗಣ್ಯರಿಂದ 317 ಕೋಟಿ ರೂ.ಈ ವರೆಗೆ ಲಭಿಸಿದೆ.