ತಿರುವನಂತಪುರ: ಮಕ್ಕಳ ಅಶ್ಲೀಲ ಚಿತ್ರಗಳ ಹುಡುಕಾಟ, ಸಂಗ್ರಹ ಹಾಗೂ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಕೇರಳ ರಾಜ್ಯದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 37 ಪ್ರಕರಣಗಳನ್ನು ದಾಖಲಿಸಿದ್ದು, 6 ಜನರನ್ನು ಬಂಧಿಸಿದ್ದಾರೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಪೊಲೀಸ್ ಇಲಾಖೆ, 'ಪಿ-ಹಂಟ್ ಎಂಬ ಕಾರ್ಯಾಚರಣೆಯನ್ನು ರಾಜ್ಯವ್ಯಾಪಿ ಕೈಗೊಳ್ಳಲಾಗಿತ್ತು.
ತಿರುವನಂತಪುರ, ಕೊಲ್ಲಂ, ಪತ್ತನಮಿಟ್ಟ, ಮಳಪ್ಪುರಂ, ಕೋಯಿಕೋಡ್ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ 455 ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ಇದರಲ್ಲಿ ಅತಿ ಹೆಚ್ಚು ಪ್ರಕರಣಗಳು ಮಳಪ್ಪುರಂ ಜಿಲ್ಲೆಯೊಂದರಲ್ಲೇ ಪತ್ತೆಯಾಗಿವೆ. ಈ ಜಿಲ್ಲೆಯ 60 ಸ್ಥಳಗಳಲ್ಲಿ 23 ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ' ಎಂದು ಹೇಳಲಾಗಿದೆ.
'ತಿರುವನಂತರಪುರದ ಗ್ರಾಮೀಣ ಭಾಗದ 39 ಸ್ಥಳಗಳಲ್ಲಿ ನಡೆದ ಶೋಧ ಕಾರ್ಯದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿರುವ 29 ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ತಿರುವನಂತರಪುರ ನಗರ ವ್ಯಾಪ್ತಿಯ 22 ಸ್ಥಳಗಳಲ್ಲಿ ಐದು ವಿದ್ಯುನ್ಮಾನ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದಂತೆ ಪತ್ತನಮಿಟ್ಟದಲ್ಲಿ 8, ಅಲ್ಲಪುಳದಲ್ಲಿ 8, ಕೊಲ್ಲಂ- 7, ಕಾಸರಗೋಡು- 5, ತ್ರಿಶೂರ್ ಗ್ರಾಮೀಣ, ನಗರ ಹಾಗೂ ವಯನಾಡ್‌ನಲ್ಲಿ ತಲಾ 3 ಪ್ರಕರಣಗಳು ಪತ್ತೆಯಾಗಿವೆ' ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಲಯಾಳ ಚಿತ್ರರಂಗದಲ್ಲಿನ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತ ನ್ಯಾ. ಹೇಮಾ ವರದಿಯು ಇಡೀ ದೇಶದಲ್ಲೇ ತಲ್ಲಣ ಉಂಟು ಮಾಡಿರುವ ಸಂದರ್ಭದಲ್ಲೇ, ಮಕ್ಕಳ ಅಶ್ಲೀಲ ಚಿತ್ರಗಳ ಹಂಚಿಕೊಳ್ಳುವ ಬೃಹತ್ ಜಾಲ ಪತ್ತೆಯಾಗಿರುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.