ಅಬುಜ: ಪೆಟ್ರೋಲ್ ಟ್ಯಾಂಕರ್ ಮತ್ತು ಟ್ರಕ್ ನಡುವೆ ಅಪಘಾತದ ಬಳಿಕ ಬೃಹತ್ ಸ್ಫೋಟ ಸಂಭವಿಸಿ 48 ಮಂದಿ ಮೃತಪಟ್ಟಿರುವ ದುರ್ಘಟನೆ ನೈಜೀರಿಯಾದಲ್ಲಿ ನಡೆದಿದೆ.
ಅಲ್ಲದೆ, ಬೇರೆಡೆಗೆ ಸಾಗಿಸಲಾಗುತ್ತಿದ್ದ 50 ಜಾನುವಾರುಗಳು ಸಹ ದುರ್ಘಟನೆಯಲ್ಲಿ ಸಜೀವ ದಹನವಾಗಿವೆ ಎಂದು ನೈಜೀರಿಯಾದ ತುರ್ತು ನಿರ್ವಹಣಾ ಕೇಂದ್ರದ ಮಹಾನಿರ್ದೇಶಕ ಅಬ್ದುಲ್ಲಾ ಬಾಬಾ ಅರಬ್ ಹೇಳಿದ್ದಾರೆ.
ಅಪಘಾತದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ಧಾರೆ.
ಮೊದಲಿಗೆ 30 ಮೃತದೇಹಗಳು ಸಿಕ್ಕಿದ್ದವು. ಬಳಿಕ, 18 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಗವರ್ನರ್ ಮೊಹಮ್ಮದ್ ಬಾಗೊ, ವಾಹನ ಚಾಲಕರು ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅಪಘಾತದ ಸ್ಥಳದ ಸುತ್ತಮುತ್ತಲ ಜನ ಶಾಂತಿ ಕಾಪಾಡಬೇಕು ಎಂದಿದ್ದಾರೆ.
ನೈಜೀರಿಯಾದಲ್ಲಿ ಸರಕು ಸಾಗಣೆಗೆ ಸೂಕ್ತ ರೈಲ್ವೆ ಮಾರ್ಗದ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಮುಖ ಹೆದ್ದಾರಿಗಳಲ್ಲಿ ಟ್ರಕ್‌ಗಳ ಅಪಘಾತ ಸಾಮಾನ್ಯವಾಗಿದೆ ಎಂದು ವರದಿ ತಿಳಿಸಿದೆ
2020ರಲ್ಲಿ ಒಂದೇ ವರ್ಷದಲ್ಲಿ 1,531 ಗ್ಯಾಸೊಲಿನ್ ಟ್ಯಾಂಕರ್ ಅಪಘಾತ ಸಂಭವಿಸಿವೆ. ಇದರಲ್ಲಿ 535 ಮಂದಿ ಮೃತಪಟ್ಟು, 1,142 ಮಂದಿ ಗಾಯಗೊಂಡಿದ್ದಾರೆ.