ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಎರಡನೇ ಹಂತದಲ್ಲಿ ವಿಧಾನಸಭೆಯ 26 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿದ್ದು, ಸರಾಸರಿ ಶೇ 56.05ರಷ್ಟು ಮತದಾನವಾಗಿದೆ. ಮತದಾನ ಪ್ರಕ್ರಿಯೆ ಶಾಂತಿಯುತವಾಗಿದ್ದು, ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಮೊದಲ ಬಾರಿಯ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು.
'ರಾಜ್ಯದಲ್ಲಿ ಶಾಂತಿ ಸ್ಥಾಪನೆಯಷ್ಟೇ ಅಲ್ಲ. ಯುವಜನರಿಗೆ ಉದ್ಯೋಗ, ಕೌಶಲಯುಕ್ತ ಶಿಕ್ಷಣ ನೀಡುವ ಸರ್ಕಾರ ಅಗತ್ಯ' ಎಂದು ಮೊದಲ ಬಾರಿಗೆ ಮತಹಕ್ಕು ಚಲಾಯಿಸಿದ ಅನನ್ಯಾ ಮತ್ತು ವಿದ್ಯಾರ್ಥಿ ಸಾರ್ವರ್ ಅವರು ಪ್ರತಿಕ್ರಿಯಿಸಿದರು.
ಮೂರು ವರ್ಷಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿ ಬಾಧಿಸಿದ್ದ ಗಡಿಭಾಗದ ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿಯೂ ಮತದಾರರು ಹೆಚ್ಚು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಗಮನಸೆಳೆಯಿತು.
ಪೀರ್ ಪಾಂಜಲ್ ವಲಯ ಎಂದೇ ಈ ಜಿಲ್ಲೆಗಳನ್ನು ಗುರುತಿಸಲಾಗುತ್ತದೆ. ಗಡಿನಿಯಂತ್ರಣ ರೇಖೆಗೆ (ಎಲ್‌ಒಸಿ) ಹೊಂದಿಕೊಂಡಂತೆ ಮತಗಟ್ಟೆಗಳಿದ್ದ ಕಡೆಯೂ ಶಾಂತಿಯುತವಾಗಿ ಮತದಾನ ಜರುಗಿದೆ. ಈ ಭಾಗದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿತ್ತು.
ಜಮ್ಮು ವಲಯದ ಶ್ರೀಮಾತಾ ವೈಷ್ಣೋದೇವಿ ಕ್ಷೇತ್ರದಲ್ಲಿ ಗರಿಷ್ಠ, ಅಂದರೆ ಶೇ 75.29ರಷ್ಟು ಮತದಾನವಾಗಿದೆ. ಪೂಂಛ್ ಹವೇಲಿ (ಶೇ 72.71), ಗುಲಾಬ್‌ಗಢ (ಶೇ 72.19), ಸುರಾನ್‌ಕೋಟ (ಶೇ 72.18) ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ನಡೆದ ಎರಡನೇ ಹಂತದ ಮತದಾನದ ವೇಳೆ ಪೂಂಛ್ ಜಿಲ್ಲೆಯ ಸುರಾನ್‌ಕೋಟ್‌ನ ಮತಗಟ್ಟೆಯಲ್ಲಿ ಕಂಡುಬಂದ ಚಿತ್ರಣ
ಚುನಾವಣೆ ನಡೆದ 26 ಕ್ಷೇತ್ರಗಳ ಪೈಕಿ 20ರಲ್ಲಿ 2014ರ ಚುನಾವಣೆಗಿಂತಲೂ ಕಡಿಮೆ ಪ್ರಮಾಣದ ಮತದಾನವಾಗಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, 2014ರಲ್ಲಿ ಈ ಕ್ಷೇತ್ರದಲ್ಲಿ ಸರಾಸರಿ ಶೇ 60ಕ್ಕಿಂತಲೂ ಅಧಿಕ ಮತದಾನವಾಗಿತ್ತು.
ಕಾಶ್ಮೀರ ವಲಯದಲ್ಲಿ ಖಾನ್‌ಸಾಹಿಬ್ ಕ್ಷೇತ್ರದಲ್ಲಿ ಗರಿಷ್ಠ ಶೇ 67.70ರಷ್ಟು ಮತದಾನವಾಗಿದ್ದರೆ, ಕಂಗನ್ (ಶೇ 67.60), ಛಾರ್ ಐ ಶರೀಫ್ ಕ್ಷೇತ್ರದಲ್ಲಿ ಶೇ 66ರಷ್ಟು ಮತದಾನವಾಗಿತ್ತು. ಹಬ್ಬ ಕದಲ್ ಕ್ಷೇತ್ರದಲ್ಲಿ ಕನಿಷ್ಠ ಶೇ 15.80ರಷ್ಟು ಮತದಾನವಾಗಿದೆ.
ಪ್ರಜಾಪ್ರಭುತ್ವ ಕ್ರಮದಲ್ಲಿ ಮತದಾನ: ಆಂಡ್ರ್ಯೂಸ್
ಕೇಂದ್ರ ಸರ್ಕಾರದ ಆಹ್ವಾನದಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ 15 ದೇಶಗಳ ರಾಯಭಾರಿಗಳಿದ್ದ ನಿಯೋಗವು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿತು. ನಿಯೋಗದ ಜೊತೆ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳೂ ಇದ್ದರು.
ನಿಯೋಗದಲ್ಲಿ ಅಮೆರಿಕ, ಮೆಕ್ಸಿಕೊ, ಗಯಾನಾ, ದಕ್ಷಿಣ ಕೊರಿಯಾ, ಸೊಮಾಲಿಯಾ, ಪನಾಮಾ, ಸಿಂಗಪುರ, ನೈಜಿರಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ನಾರ್ವೆ, ತಾಂಜಾನಿಯಾ, ರುವಾಂಡಾ, ಅಲ್ಜಿರಿಯಾ, ಫಿಲಿಪ್ಪೀನ್ಸ್ ಪ್ರತಿನಿಧಿಗಳಿದ್ದರು. ಶ್ರೀನಗರ, ಬಡಗಾಮ್ ಜಿಲ್ಲೆಗಳಿಗೆ ಭೇಟಿ ನೀಡಿದ್ದರು.
ನಿಯೋಗದ ನೇತೃತ್ವ ವಹಿಸಿದ್ದ ಅಮೆರಿಕ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಜೋರ್ಗನ್ ಕೆ. ಆಂಡ್ರ್ಯೂಸ್, 'ಮತದಾನ ಪ್ರಕ್ರಿಯೆ ಆರೋಗ್ಯಕರ ಮತ್ತು ಪ್ರಜಾಪ್ರಭುತ್ವ ಕ್ರಮದಲ್ಲಿದೆ. ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ' ಎಂದು ತಿಳಿಸಿದರು.
'ಸಿಂಗಪುರದಲ್ಲಿದ್ದಂತೆ ಹೆಚ್ಚಿನ ಹಬ್ಬದ ಸಂಭ್ರಮ ಕಾಣಲಿಲ್ಲ' ಎಂದು ಸದಸ್ಯೆ, ಸಿಂಗಪುರದ ಅಲೈಸ್ ಚೇನ್ ಪ್ರತಿಕ್ರಿಯಿಸಿದರು.
'20 ದೇಶಗಳ ಪ್ರತಿನಿಧಿಗಳನ್ನು
ಆಹ್ವಾನಿಸಿದ್ದು, 15 ಮಂದಿ ಭೇಟಿ ನೀಡಿದ್ದಾರೆ. 3ನೇ ಹಂತದ ಮತದಾನದ ವೇಳೆ ಉಳಿದವರು ಭೇಟಿ ನೀಡಬಹುದು' ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
'ಇತಿಹಾಸ ನಿರ್ಮಾಣವಾಗುತ್ತಿದೆ'
'ಹಿಂದೆ, ಮತದಾನ ಬಹಿಷ್ಕರಿಸುತ್ತಿದ್ದವರು ಇಂದು ಸಾಲಿನಲ್ಗಿ ನಿಂತು ಮತಹಕ್ಕು ಚಲಾಯಿಸುತ್ತಿದ್ದಾರೆ. ಇತಿಹಾಸ ನಿರ್ಮಾಣವಾಗುತ್ತಿದೆ' ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಿಇಸಿ ರಾಜೀವ್ ಕುಮಾರ್, 'ಎರಡು ಹಂತದ ಮತದಾನ ಸಿಸಿಟಿವಿ ದೃಶ್ಯಗಳಿವೆ. ಯುವಜನರು,
ಮಹಿಳೆಯರು, ಹಿರಿಯರು ಸಾಲಿನಲ್ಲಿ ನಿಂತು ಹಕ್ಕುಚಲಾಯಿಸಿದ್ದಾರೆ' ಎಂದರು.
'ಇದು, ಜನತಂತ್ರದ ಹಬ್ಬ. ಹಿಂದೆ ಮತದಾನ ಬಹಿಷ್ಕರಿಸುತ್ತಿದ್ದ ಕಡೆಯೂ ಮತದಾನ ಜರುಗುತ್ತಿದೆ. ಇದು, ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ' ಎಂದು ಆಯುಕ್ತರಾದ ಗ್ಯಾನೇಶ್ ಕುಮಾರ್, ಸುಖ್‌ಬೀರ್ ಸಿಂಗ್ ಸಂಧು ಹೇಳಿದರು.