ಕಾಸರಗೋಡು: ಬೆಡ್‍ರೂಮ್ ದೃಶ್ಯ ಚಿತ್ರೀಕರಿಸಿ ಬ್ಲ್ಯಾಕ್‍ಮೇಲ್ ನಡೆಸಿ 58ಲಕ್ಷ ರೂ. ಎಗರಿಸಿದ ಕಾಸರಗೋಡು ನಿವಾಸಿಯನ್ನು ಕೊಚ್ಚಿ ಕಡವತ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಚಟ್ಟಂಚಾಲ್ ಬಂದಾಡ್ ಹೌಸ್ ನಿವಾಸಿ ಅಬ್ದುಲ್ ರಹಮಾನ್ ಬಂಧಿತ.
ಕಾಸರಗೋಡು ನಿವಾಸಿ ಹಾಗೂ ಕೊಚ್ಚಿಯ ಕಲ್ಲೂರ-ಕತ್ತುಕಡವು ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿರುವ ಅಬ್ದುಲ್‍ರಹಮಾನ್ ಸ್ನೇಹಿತ 30ರ ಹರೆಯದ ವ್ಯಕ್ತಿಯ ದೂರಿನ ಮೇರೆಗೆ ಈ ಬಂಧನ ನಡೆದಿದೆ. ಅಬ್ದುಲ್‍ರಹಮಾನ್ ಸೇರಿದಂತೆ ಆರು ಮಂದಿ ವಿರುದ್ಧ ಕೇಸು ದಾಖಲಾಗಿದೆ.
2020 ಮಾರ್ಚ್ ತಿಂಗಳಲ್ಲಿ ತಾನು ವಾಸಿಸುವ ಕೊಠಡಿಯ ಬೆಡ್‍ರೂಮ್‍ನಲ್ಲಿ ಗುಪ್ತ ಕ್ಯಾಮರಾ ಇರಿಸಿ, ತಾನು ಸ್ನೇಹಿತೆಯರ ಜತೆಗಿದ್ದ ಫೋಟೋ ಚಿತ್ರೀಕರಿಸಿಕೊಂಡು, ನಂತರ ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವುದಾಗಿ ತಿಳಿಸಿ, ತನ್ನಿಂದ ಖುದ್ದಾಗಿ 52ಲಕ್ಷ ರೂ. ಹಾಗೂ ಬ್ಯಾಂಕ್ ಮೂಲಕ 6ಲಕ್ಷ ಸೇರಿ ಒಟ್ಟು 58ಲಕ್ಷ ರೂ. ಎಗರಿಸಿಸಲಾಗಿದೆ.
ಇಷ್ಟೊಂದು ಹಣ ಪೀಕಿಸಿದ ನಂತರವೂ ಹಣಕ್ಕಾಗಿ ಬೇಡಿಕೆಯಿರಿಸಿದಾಗ ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಅಬ್ದುಲ್‍ರಹಮಾನ್ ಹಾಗೂ ಆತನ ಸಹಚರರಾದ ಕಾಸರಗೋಡಿನ ಇರ್ಫಾನ್, ಅಮ್ಮಿ, ಆಶಿಫ್ ಹಾಗೂ ಮಟ್ಟಾಂಚೇರಿ ನಿವಾಸಿಗಳಾದ ಇಬ್ಬರು ಸೇರಿ ತನ್ನನ್ನು ಕಾರಲ್ಲಿ ಅಪಹರಿಸಿ ಅಜ್ಞಾತ ಸ್ಥಳವೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.