ಶಿಮ್ಲಾ: ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ 60ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಮಂಡಿಯಲ್ಲಿ 31, ಶಿಮ್ಲಾ-ಮಂಡಿಯಲ್ಲಿ 13, ಕಂಗ್ರಾದಲ್ಲಿ 10, ಕಿನ್ನೌರ್‌ನಲ್ಲಿ 4, ಕುಲ್ಲುವಿನಲ್ಲಿ 2 ಮತ್ತು ಉನಾ, ಸಿರ್ಮೌರ್ ಮತ್ತು ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ 5ನ್ನು (ಹಿಂದೂಸ್ತಾನ್-ಟಿಬೆಟ್ ರಸ್ತೆ) ಕಿನ್ನೌರ್ ಜಿಲ್ಲೆಯ ನೆಗುಲ್ಸಾರಿ ಬಳಿ ಬಂದ್ ಮಾಡಲಾಗಿದೆ. ರಾಜ್ಯದಲ್ಲಿ 11 ವಿದ್ಯುತ್ ಮತ್ತು ಒಂದು ನೀರು ಸರಬರಾಜು ಯೋಜನೆಯೂ ಸ್ಥಗಿತಗೊಂಡಿದೆ ಎಂದು ಎಸ್‌ಇಒಸಿ ತಿಳಿಸಿದೆ.
ಶನಿವಾರ ಸಂಜೆಯಿಂದ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಊನದಲ್ಲಿ ಅತಿ ಹೆಚ್ಚು ಅಂದರೆ 4.8 ಸೆಂ.ಮೀ ಮಳೆಯಾಗಿದೆ. ಕುಫ್ರಿಯಲ್ಲಿ 1.9 ಸೆಂ.ಮೀ, ಸಾಂಗ್ಲಾದಲ್ಲಿ 1.7 ಸೆಂ.ಮೀ, ಜುಬ್ಬರಹಟ್ಟಿಯಲ್ಲಿ 1.5 ಸೆಂ.ಮೀ, ಮಂಡಿಯಲ್ಲಿ 1.5 ಸೆಂ. ಮೀ ಮಳೆಯಾಗಿದೆ.
ರಾಜ್ಯದಲ್ಲಿ ಜೂನ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ ಒಟ್ಟು 158 ಜನ ಮೃತಪಟ್ಟಿದ್ದಾರೆ. 30 ಮಂದಿ ನಾಪತ್ತೆಯಾಗಿದ್ದಾರೆ. ಅಂದಾಜು ₹1,305 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.