ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಕಚ್ಚಾ ತೈಲ(Crude 0il )ದ ಸರಾಸರಿ ಬೆಲೆ ಪ್ರತಿ ಬ್ಯಾರೆಲ್‌ಗೆ 84 ಡಾಲರ್ ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 70 ರಿಂದ 75 ಡಾಲರ್ ಇರುವುದರಿಂದ ಭಾರತವು ಕಚ್ಚಾ ತೈಲ ಆಮದಿನಲ್ಲಿ ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ.
ಇದನ್ನು 2024 ರ ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಭಾರತದ ವಿದೇಶಿ ವಿನಿಮಯ ಸಂಗ್ರಹದ ಹೆಚ್ಚಿನ ಭಾಗವನ್ನು ಕಚ್ಚಾ ತೈಲವನ್ನು ಖರೀದಿಸಲು ಬಳಸಲಾಗುತ್ತದೆ ಎಂಬುದು ತಿಳಿದ ಸಂಗತಿಯೇ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ತೈಲ ಆಮದಿನ ಮೇಲೆ 60 ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಇನ್ನು 2025 ರ ವೇಳೆಗೆ ಕಚ್ಚಾ ತೈಲ ಬೆಲೆಗಳು ಇನ್ನೂ ದುರ್ಬಲವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಭಾರತವು ಶೇ.80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಚೀನಾ ಮತ್ತು ಅಮೆರಿಕದ ನಂತರ ಭಾರತವು ಮೂರನೇ ಸ್ಥಾನದಲ್ಲಿದೆ. ಕಚ್ಚಾ ತೈಲ ಆಮದು ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆ ಬೀಳುತ್ತದೆ ಎಂಬುದು ಇದರಿಂದ ಸ್ಪಷ್ಟ. ಆದರೆ, ಈಗ ಈ ಹೊರೆ ಗಣನೀಯವಾಗಿ ಕಡಿಮೆಯಾಗಲಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತವೇ ಇದಕ್ಕೆ ಕಾರಣ.
ಭಾರತವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024-25 ರಲ್ಲಿ ತೈಲ ಆಮದಿನ ಮೇಲೆ ಸರ್ಕಾರವು 60 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಬಹುದು. ಒಂದು ಅಂದಾಜಿನ ಪ್ರಕಾರ, ಕಚ್ಚಾ ತೈಲದಲ್ಲಿ ಪ್ರತಿ ಬ್ಯಾರೆಲ್‌ಗೆ ಒಂದು ಡಾಲರ್ ಕುಸಿತವು ಭಾರತದ ವಾರ್ಷಿಕ ಆಮದು ಬಿಲ್‌ನಲ್ಲಿ 13 ಸಾವಿರ ಕೋಟಿ ರೂಪಾಯಿ ಉಳಿಸುತ್ತದೆ ಎನ್ನಲಾಗಿದೆ.