ನವದೆಹಲಿ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜನದಟ್ಟಣೆ ಉಂಟಾಗುವ ಸಾಧ್ಯತೆ ಇರುವ ಕಾರಣ ದೇಶದಾದ್ಯಂತ ಒಟ್ಟು 6,000 ವಿಶೇಷ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ವ್ಯವಸ್ಥೆ ಮಾಡಿದ್ದು ಇದರಿಂದ ಸುಮಾರು 1 ಕೋಟಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ನವದೆಹಲಿ: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಜನದಟ್ಟಣೆ ಉಂಟಾಗುವ ಸಾಧ್ಯತೆ ಇರುವ ಕಾರಣ ದೇಶದಾದ್ಯಂತ ಒಟ್ಟು 6,000 ವಿಶೇಷ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ವ್ಯವಸ್ಥೆ ಮಾಡಿದ್ದು ಇದರಿಂದ ಸುಮಾರು 1 ಕೋಟಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, 'ದುರ್ಗಾ ಪೂಜೆ, ದೀಪಾವಳಿ ಹಾಗೂ ಛತ್ ಹಬ್ಬಗಳ ಸಂದರ್ಭದಲ್ಲಿ ದೇಶದ ಅನೇಕ ಕಡೆಗಳಿಂದ ತಮ್ಮ ಊರುಗಳಿಗೆ ತೆರಳುವ ಜನರಿಗೆ ಅನುಕೂಲ ಕಲ್ಪಿಸಲು ಹಾಗೂ ದಟ್ಟಣೆ ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.
'ಪ್ರಯಾಣಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ 108 ರೈಲುಗಳಿಗೆ ಹೆಚ್ಚುವರಿಯಾಗಿ ಸುಮಾರು 12,500 ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿ, ದುರ್ಗಾ ಪೂಜೆ ಹಾಗೂ ಛತ್ ಹಬ್ಬಗಳ ಸಂದರ್ಭದಲ್ಲಿ ವಿಶೇಷವಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮಾರ್ಗದ ರೈಲುಗಳಲ್ಲಿ ಹೆಚ್ಚಿನ ದಟ್ಟಣೆ ಉಂಟಾಗುತ್ತದೆ. ಕಳೆದ ವರ್ಷ ಈ ಸಂದರ್ಭದಲ್ಲಿ ಸುಮಾರು 4,429 ವಿಶೇಷ ರೈಲುಗಳು ಸಂಚರಿಸಿದ್ದವು. ಈ ವರ್ಷ ಒಟ್ಟು 5,975 ರೈಲುಗಳು ಸಂಚರಿಸಲಿವೆ' ಎಂದರು.
ಅಕ್ಟೋಬರ್ 9ರಿಂದ ದುರ್ಗಾ ಪೂಜೆ ಆರಂಭವಾಗಲಿದೆ. ಅದೇ ತಿಂಗಳ 31ರಂದು ದೀಪಾವಳಿ ಹಬ್ಬ ಹಾಗೂ ನವೆಂಬರ್ 7 ಮತ್ತು 8 ರಂದು ಛತ್ ಉತ್ಸವವನ್ನು ಆಚರಿಸಲಾಗುತ್ತದೆ.