ಬೈರೂತ್ : ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಕೆಲವೆಡೆ ಮಂಗಳವಾರ ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ ಪರಿಣಾಮ ಒಂಬತ್ತು ಮಂದಿ ಮೃತಪಟ್ಟು, 2,800ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಹಿಜ್ಬುಲ್ಲಾ ಬಂಡುಕೋರ ಸಂಘಟನೆಯ ಮುಖಂಡರಾದ ಅಲಿ ಅಮ್ಮಾರ್ ಮತ್ತು ಹಸನ್ ಫಲ್‌ಲಲ್ಲಾ ಅವರ ಪುತ್ರರೂ ಮೃತಪಟ್ಟವರಲ್ಲಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಮೃತರಲ್ಲಿ ಒಬ್ಬ ಬಾಲಕಿ ಸೇರಿದ್ದಾಳೆ. ಗಾಯಗೊಂಡವರ ಪೈಕಿ 200 ಜನರ ಸ್ಥಿತಿ ಗಂಭೀರವಾಗಿದೆ' ಎಂದು ಲೆಬನಾನ್ ಆರೋಗ್ಯ ಸಚಿವ ಫಿರಾಸ್ ಅಬಿಯದ್ ಹೇಳಿದ್ದಾರೆ.
ಲೆಬನಾನ್‌ನ ಬೆಕಾ ಕಣಿವೆ ಪ್ರದೇಶದಲ್ಲಿ ಹಿಜ್ಬುಲ್ಲಾ ಸಂಘಟನೆಯ ಸದಸ್ಯನ ಪೇಜರ್ ಸ್ಫೋಟಗೊಂಡಾಗ ಆತನ 10 ವರ್ಷದ ಮಗಳು ಮೃತಪಟ್ಟಿದ್ದಾಳೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸ್ಥಳೀಯ ಕಾಲಮಾನ ಮಂಗಳವಾರ ಮಧ್ಯಾಹ್ನ 3.45ರ ವೇಳೆಗೆ ಆರಂಭಿಕ ಸ್ಫೋಟ ಸಂಭವಿಸಿದೆ. ಆ ಬಳಿಕದ ಒಂದು ಗಂಟೆ ನಿರಂತರ ಸ್ಫೋಟಗಳು ಸಂಭವಿಸಿವೆ. ಸ್ಫೋಟಕ್ಕೆ ಏನು ಕಾರಣ ಎಂಬುದು ತಿಳಿದುಬಂದಿಲ್ಲ.
ಈ ಕೃತ್ಯದ ಹಿಂದೆ ಇಸ್ರೇಲ್ ಕೈವಾಡ ಇದೆ. ಅತ್ಯಾಧುನಿಕ ರಿಮೋಟ್ ತಂತ್ರಜ್ಞಾನ ಬಳಸಿ, ಸ್ಫೋಟ ನಡೆಸಲಾಗಿದೆ ಎಂದು ಲೆಬನಾನ್ ಸರ್ಕಾರದ ಅಧಿಕಾರಿಗಳು ಆರೋಪಿಸಿದ್ದಾರೆ. ಈ ಆರೋಪಗಳ ಕುರಿತು ಪ್ರತಿಕ್ರಿಯಿಸಲು ಇಸ್ರೇಲ್ ಸೇನೆ ನಿರಾಕರಿಸಿದೆ.
ಲೆಬನಾನ್ ಪ್ರಧಾನಿ ನಜೀಬ್ ಮಿಕಾತಿ ಅವರು, 'ಇಸ್ರೇಲ್ ನಡೆಸಿದ ಈ ಕ್ರಿಮಿನಲ್ ಆಕ್ರಮಣವು, ಲೆಬನಾನ್‌ನ ಸಾರ್ವಭೌಮತೆಯ ಉಲ್ಲಂಘನೆ' ಎಂದು ಟೀಕಿಸಿದ್ದಾರೆ.
ಸಿರಿಯಾದಲ್ಲಿ 14 ಮಂದಿಗೆ ಗಾಯ: ಡಮಾಸ್ಕಸ್ ಮತ್ತು ದೇಶದ ಇತರ ಕೆಲವೆಡೆ ಮಂಗಳವಾರ ಪೇಜರ್ ಸ್ಪೋಟದಿಂದ 14 ಮಂದಿ ಗಾಯಗೊಂಡಿದ್ಧಾರೆ ಎಂದು ಸಿರಿಯಾದಲ್ಲಿರುವ ಮಾನವ ಹಕ್ಕುಗಳ ವೀಕ್ಷಕರೊಬ್ಬರು ತಿಳಿಸಿದ್ದಾರೆ.
ಪೇಜರ್ ಬಳಕೆ ಏಕೆ?:
ಮೊಬೈಲ್ ಫೋನ್‌ಗಳು ಬರುವ ಮುನ್ನ ಪೇಜರ್‌ಅನ್ನು ಸಂವಹನ ಸಾಧನವಾಗಿ ಬಳಸಲಾಗುತ್ತಿತ್ತು. ಆದರೆ ಹಿಜ್ಬುಲ್ಲಾ ಬಂಡುಕೋರರು ಪರಸ್ಪರ ಸಂವಹನ ನಡೆಸಲು ಈಗಲೂ ಪೇಜರ್‌ಅನ್ನೇ ಬಳಸುತ್ತಿದ್ದಾರೆ. ಪೇಜರ್ ಮೂಲಕ ಕಳುಹಿಸುವ ಸಂದೇಶಗಳು ರಹಸ್ಯವಾಗಿ ಇರುತ್ತದೆ ಎಂಬುದೇ ಇದಕ್ಕೆ ಕಾರಣ.
ಈಗ ಸ್ಫೋಟಗೊಂಡಿರುವ ಪೇಜರ್‌ಗಳು ಹೊಸ ಮಾದರಿಯದ್ದಾಗಿದ್ದು, ಹಿಜ್ಬುಲ್ಲಾ ಸಂಘಟನೆಯು ಈಚೆಗಷ್ಟೇ ತರಿಸಿಕೊಂಡಿತ್ತು ಎಂದು ಮೂಲಗಳು ಹೇಳಿವೆ.
ಇಸ್ರೇಲ್ ಹೊಣೆ: ಹಿಜ್ಬುಲ್ಲಾ
ಹಿಜ್ಬುಲ್ಲಾ ಬಂಡುಕೋರ ಸಂಘಟನೆಯು ಪೇಜರ್ ಸ್ಫೋಟಕ್ಕೆ ಇಸ್ರೇಲ್‌ಅನ್ನು ದೂಷಿಸಿದೆ. 'ಈ ಕ್ರಿಮಿನಲ್ ಕೃತ್ಯಕ್ಕೆ ನಮ್ಮ ಶತ್ರು ಇಸ್ರೇಲ್‌ಅನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡುತ್ತೇವೆ. ಈ ಪಾಪದ ಕೆಲಸಕ್ಕೆ ಅವರು ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ' ಎಂದು ಸಂಘಟನೆಯು ಪ್ರಕಟಣೆಯಲ್ಲಿ ತಿಳಿಸಿದೆ. ಸಂಘಟನೆಯ ಮುಖ್ಯಸ್ಥ ಹಸನ್ ನಸ್ರಲ್ಲಾ ಅವರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
'ಈ ಘಟನೆಯು ಇಸ್ರೇಲ್ ನಡೆಸಿದ ಭಯೋತ್ಪಾದನಾ ಕೃತ್ಯ' ಎಂದು ಪ್ಯಾಲೆಸ್ಟೀನ್ ಬಂಡುಕೋರ ಸಂಘಟನೆ ಹಮಾಸ್ ಆರೋಪಿಸಿದೆ.