ದಾಂತೇವಾಡ: ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದ ಒಂಬತ್ತು ಮಂದಿ ನಕ್ಸಲರ ತಲೆ ಮೇಲೆ ಒಟ್ಟು ₹59 ಲಕ್ಷ ಸಂಚಿತ ಬಹುಮಾನ ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ನಕ್ಸಲ್ ಸಂಘಟನೆಯ ದಂಡಕಾರಣ್ಯ ವಿಶೇಷ ವಲಯ ಸಮಿತಿಯ (ಡಿಕೆಎಸ್‌ಜಡ್‌ಸಿ) ಪ್ರಮುಖ ಸದಸ್ಯನಾಗಿದ್ದ ರಣಧೀರ್ ಎಂಬಾತನ ಮೇಲೆ ₹ 25 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಡಿಕೆಎಸ್‌ಜಡ್‌ಸಿಯ ಪ್ರಮುಖ ಸದಸ್ಯರಲ್ಲಿ ರಣಧೀರ್ ಎರಡನೆಯವನು. ಏಪ್ರಿಲ್‌ನಲ್ಲಿ, ಬಸ್ತಾರ್ ವಿಭಾಗದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಡಿಕೆಎಸ್‌ಜಡ್‌ಸಿ ಮತ್ತೊಬ್ಬ ಪ್ರಮುಖ ಸದಸ್ಯ ಜೋಗಣ್ಣ ಹತನಾಗಿದ್ದ ಎಂದು ಬಸ್ತಾರ್ ವಲಯ ಐ.ಜಿ ಸುಂದರರಾಜ್ ಪಿ. ತಿಳಿಸಿದ್ದಾರೆ.
ದಾಂತೇವಾಡ-ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಸಮವಸ್ತ್ರಧಾರಿ ಆರು ಮಹಿಳೆಯರು ಸೇರಿ ಒಂಬತ್ತು ನಕ್ಸಲರನ್ನು ಭದ್ರತಾ ಸಿಬ್ಬಂದಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು.
ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಒಂದು ಎಸ್‌ಎಲ್‌ಆರ್ (ಸೆಲ್ಫ್-ಲೋಡಿಂಗ್ ರೈಫಲ್), ಒಂದು .303 ರೈಫಲ್, ಎರಡು 12-ಬೋರ್ ರೈಫಲ್‌ಗಳು, ಒಂದು 315-ಬೋರ್ ರೈಫಲ್, ಒಂದು 8 ಎಂಎಂ ರೈಫಲ್, ಒಂದು ಬಿಜಿಎಲ್ (ಬ್ಯಾರೆಲ್ ಗ್ರೆನೇಡ್ ಲಾಂಚರ್) ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುಂದರರಾಜ್ ತಿಳಿಸಿದ್ದಾರೆ.
ಹತರಾದ ಆರು ಮಹಿಳಾ ನಕ್ಸಲರನ್ನು ನಕ್ಸಲ್ ಸೇನಾ ತುಕಡಿ ಸದಸ್ಯೆ ಕುಮಾರಿ ಶಾಂತಿ, ಪ್ರದೇಶ ಸಮಿತಿ ಸದಸ್ಯರಾದ ಸುಶೀಲಾ ಮಡ್ಕಂ, ಗಂಗಿ ಮುಚಕಿ ಮತ್ತು ಕೋಸಾ ಮದ್ವಿ, ವಿಭಾಗೀಯ ಸಮಿತಿ ಭದ್ರತಾ ದಳದ ಸದಸ್ಯೆ ಲಲಿತಾ ಮತ್ತು ಆಂಧ್ರ-ಒಡಿಶಾ ಗಡಿ ವಿಶೇಷ ವಲಯ ಸಮಿತಿಯ (ಎಒ) ಕಾವಲುಗಾರ್ತಿ ಕವಿತಾ ಎಂದು ಗುರುತಿಸಲಾಗಿದೆ. ಇವರ ಮೇಲೆ ತಲಾ ₹ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಅಲ್ಲದೆ, ಹತರಾದ ಮೂವರು ಪುರುಷ ನಕ್ಸಲರಲ್ಲಿ ಹಿದ್ಮೆ ಮಡ್ಕಂ ಮತ್ತು ಕಮಲೇಶ್ ಅವರ ಮೇಲೆ ತಲಾ 2 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
'ಡಿಕೆಎಸ್‌ಜಡ್‌ಸಿ, ಛತ್ತೀಸಗಢದ ಬಸ್ತಾರ್ ಪ್ರದೇಶದ ಜತೆಗೆ ಪಕ್ಕದ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ ಮತ್ತು ಮಹಾರಾಷ್ಟ್ರದ ಭಾಗಗಳಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ನಕ್ಸಲರ ಪ್ರಭಾವ ಹೆಚ್ಚಿದ್ದ ಬಸ್ತಾರ್ ಪ್ರದೇಶದಲ್ಲಿ ಈಗ ನಡೆಸಿರುವ ಕಾರ್ಯಾಚರಣೆಯು ನಕ್ಸಲರ ಪಶ್ಚಿಮ ಬಸ್ತಾರ್ ಮತ್ತು ದರ್ಭಾ ವಿಭಾಗಗಳಿಗೆ ಭಾರಿ ಹೊಡೆತ ನೀಡಿದೆ' ಎಂದು ಅವರು ತಿಳಿಸಿದ್ದಾರೆ.