ಕಾಸರಗೋಡು : ನಗರಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸ್ಥಳೀಯಾಡಳಿತ ಅದಾಲತ್‍ನಲ್ಲಿ ವಿಲೇವಾರಿಯಾದ ಶೇ. 99.08 ದೂರುಗಳಲ್ಲಿ ಅರ್ಜಿದಾರರ ಪರವಾಗಿ ತೀರ್ಪು ಹೊರಬಿದ್ದಿದೆ. ಒಟ್ಟು 657 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, ಅದರಲ್ಲಿ 651 ತೀರ್ಪು ಅರ್ಜಿದಾರರಿಗೆ ಪರವಾಗಿ ವಿಲೇವಾರಿಯಾಗಿದೆ. ಕಾನೂನಾತ್ಮಕವಾಗಿ ಸಮರ್ಥನೀಯವಲ್ಲ ಎಂಬ ಕಾರಣಕ್ಕೆ ಆರು ದೂರುಗಳನ್ನು ವಜಾಗೊಳಿಸಲಾಗಿದೆ.
ಮುಂಗಡವಾಗಿ ಆನ್‍ಲೈನ್‍ನಲ್ಲಿ ಸಲ್ಲಿಕೆಯಾಗಿದ್ದ 667 ದೂರುಗಳ ಪೈಕಿ 652 ದೂರುಗಳನ್ನು ಪರಿಹರಿಸಲಾಗಿದೆ. ಇವುಗಳಲ್ಲಿ 645 (96.7%) ಪರವಾಗಿ ತೀರ್ಮಾನಿಸಲಾಯಿತು. ಮುಂದಿನ ತನಿಖೆಗಾಗಿ 15 ದೂರುಗಳನ್ನು ಸಂಬಂಧಪಟ್ಟವರಿಗೆ ರವಾನಿಸಲಾಗಿದೆ. ಮಂಗಳವಾರ ನಡೆದ ಅದಾಲತ್‍ನಲ್ಲಿ ಸ್ಥಳದಲ್ಲಿ 169 ದೂರುಗಳು ಬಂದಿದ್ದು, 6 ದೂರುಗಳನ್ನು ಅದಾಲತ್‍ನಲ್ಲಿ ವಿಲೇವಾರಿ ಮಾಡಲಾಗಿದೆ. 178 ದೂರುಗಳನ್ನು ಹೆಚ್ಚಿನ ತನಿಖೆಗಾಗಿ ರವಾನಿಸಲಾಗಿದೆ. ಇವುಗಳಿಗೆ ಎರಡು ವಾರಗಳಲ್ಲಿ ಪರಿಹಾರ ಕಲ್ಪಿಸಲು ತೀರ್ಮಾನಿಸಲಾಗಿದೆ.
ಸಚಿವ ಎಂ.ಬಿ ರಾಜೇಶ್ ಅವರ ಜತೆ ವಿಶೇಷ ಕಾರ್ಯದರ್ಶಿ ಟಿ.ವಿ.ಅನುಪಮಾ, ಪ್ರಧಾನ ನಿರ್ದೇಶಕ ಸೀರಂ ಸಾಂಬಶಿವ ರಾವ್, ಗ್ರಾಮಾಂತರ ನಿರ್ದೇಶಕ ದಿನೇಶ ಚೆರುವಾಟ್, ಮುಖ್ಯ ಇಂಜಿನಿಯರ್ ಸಂದೀಪ್ ಕೆ.ಜಿ., ಮುಖ್ಯ ನಗರ ಯೋಜನಾಧಿಕಾರಿ ಶಿಜಿ ಚಂದ್ರನ್ ಅದಾಲತ್ ಯಶಸ್ವಿಗೆ ಸಹಕರಿಸಿದರು.