ಕಾಸರಗೋಡು: ಕಾನೂನುಬದ್ಧವಾಗಿ ಪರವಾನಗಿ ಹೊಂದಿರುವ ಕೆಂಪುಕಲ್ಲು ಕ್ವಾರಿಗಳ ಕಾರ್ಯಾಚರಣೆ ಯಾವುದೇ ತಡೆ ಉಂಟಾಗದು ಎಂಬುದಾಗಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ಕೆಂಪು ಕಲ್ಲು ಕ್ವಾರಿ ಮಾಲಿಕರ ಕ್ಷೇಮ ಸಂಗಮ ಸಮರ ಸಮಿತಿ ವತಿಯಿಂದ ನಡೆಯುತ್ತಿರುವ ಸರಣಿ ಉಪವಾಸ ಸತ್ಯಾಗ್ರಹ ಕೊನೆಗಾಣಿಸುವ ನಿಟ್ಟಿನಲ್ಲಿ ಶಾಸಕರಾದ ಎನ್.ಎ.ನೆಲ್ಲಿಕುನ್ನು ಮತ್ತು ಸಿ.ಎಚ್.ಕುಞಂಬು ಹಾಗೂ ಹೋರಾಟ ಸಮಿತಿ ಮುಖಂಡರ ಉಪಸ್ಥಿತಿಯಲ್ಲಿ ನಡೆಸಿದ ಸಂವಾದದಲ್ಲಿ ಈ ಭರವಸೆ ನೀಡಿದ್ದಾರೆ.
ಸೂಕ್ತ ಪಾಸ್ ಅಥವಾ ಪರವಾನಗಿ ಇಲ್ಲದೆ ಕೆಂಪುಕಲ್ಲು ಅಕ್ರಮ ಸಾಗಣೆ ಮತ್ತು ಕಾನೂನು ಉಲ್ಲಂಘಿಸಿ ನಡೆಯುವ ಯಾವುದೇ ಕಾರ್ಯಾಚರಣೆಗೆ ಅವಕಾಶ ನೀಡಲಾಗದು ಹಾಗೂ ಇದರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿದೆ. ಅಸ್ತಿತ್ವದಲ್ಲಿರುವ ಕಾನೂನಿನನ್ವಯ ಇತರ ಉದ್ದೇಶಗಳಿಗಾಗಿ ಪರವಾನಗಿ ನೀಡಿರುವ ಜಮೀನಿನಲ್ಲಿ ವ್ಯಾಪಕವಾಗಿ ಕೆಂಪುಕಲ್ಲು ಖನನ ನಡೆಯುತ್ತಿದ್ದು, ಇದು ಭಾರೀ ಪರಿಸರ ಹಾನಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ವಾರಿ ನಡೆಸಲು ಹಸಿರು ನ್ಯಾಯಮಂಡಳಿಯ ನಿರ್ದೇಶನ ಪಾಲಿಸುವುದೂ ಅನಿವಾರ್ಯವಾಗಿದೆ ಎಂದು ತಿಳಿಸಿದರು. ಕೆಂಪುಕಲ್ಲು ಕ್ವಾರಿ ಮಾಲಿಕ-ಕಾರ್ಮಿಕ ಸಮಿತಿ ಸಲ್ಲಿಸಿರುವ ಎಲ್ಲ ಬೇಡಿಕೆ ಈಡೇರಿಸುವಲ್ಲಿ ಜಿಲ್ಲಾಡಳಿತಕ್ಕೆ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮಟ್ಟದಲ್ಲಿ ಸಲ್ಲಿಸುವಂತೆಯೂ ಸೂಚಿಸಲಾಯಿತು.
ಜಿಲ್ಲೆಯಲ್ಲಿ ಕ್ವಾರಿ ಮಾಲೀಕರು ಸಲ್ಲಿಸಿರುವ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಅನಧಿಕೃತ ಕ್ವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ. ವಶಪಡಿಸಿಕೊಂಡ ವಾಹನಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗುವುದು. ಹಕ್ಕುಪತ್ರ ಹೊಂದಿರುವ ಭೂಮಿಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲು ಸರ್ಕಾರದ ಮಟ್ಟದ ಅನುಮತಿಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ನಾರಾಯಣನ್, ಹುಸೇನ್ ಬೆರ್ಕ, ಕೆ. ಸುಧಾಕರ, ಕೆ. ಮಣಿಕಂಠನ್, ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಪಿ. ಸುರ್ಜಿತ್, ಜಿಲ್ಲಾ ಭೂಗರ್ಭ ಇಲಾಖೆ ಅಧಿಕಾರಿ ಕೆ.ಕೆ.ವಿಜಯಾ, ತಹಶೀಲ್ದಾರರಾದ ಜಯಪ್ರಸಾದ್, ಸಿ. ಅಜಯನ್, ಎಂ. ಶ್ರೀನಿವಾಸ್, ಪಿ.ವಿ.ಮುರಳಿ, ಮಂಜೇಶ್ವರಭೂದಾಖಲೆ ತಹಶೀಲ್ದಾರ್ ಜೆ. ಲಾಲ್ ಭಾಗವಹಿಸಿದ್ದರು.