ನವದೆಹಲಿ: ಗಡುವಿನೊಳಗೆ ₹17,500 ಶುಲ್ಕವನ್ನು ಠೇವಣಿ ಇಡಲು ವಿಫಲನಾಗಿದ್ದಕ್ಕೆ ಐಐಟಿ-ಧನಬಾದ್‌ನಲ್ಲಿ ಸೀಟು ಕಳೆದುಕೊಂಡಿರುವ ಬಡ ದಲಿತ ಯುವಕನಿಗೆ ನೆರವು ನೀಡುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
'ಸಾಧ್ಯವಿರುವಷ್ಟು ನಿಮಗೆ ನೆರವು ನೀಡುತ್ತೇವೆ.
ಅತುಲ್ ಕುಮಾರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ನಡೆಸಿತು.
ಅತುಲ್ ಕುಮಾರ್ ಅವರ ಬಡ ಕುಟುಂಬ ಉತ್ತರ ಪ್ರದೇಶದ ಮುಜಫ್ಫರನಗರದ ಟಿಟೋರಾ ಗ್ರಾಮದಲ್ಲಿ ನೆಲೆಸಿದ್ದು, ತಂದೆ ದಿನಗೂಲಿಯಾಗಿದ್ದಾರೆ. ಹಂಚಿಕೆಯಾದ ಸೀಟನ್ನು 'ಬ್ಲಾಕ್' ಮಾಡಲು ಜೂನ್ 24ರ ಒಳಗಾಗಿ ₹17,500 ಶುಲ್ಕವನ್ನು ಠೇವಣಿಯಾಗಿ ಇಡಲು ಕುಮಾರ್ ಪಾಲಕರು ವಿಫಲರಾಗಿದ್ದರು.
ಅತುಲ್ ಕುಮಾರ್ ಅವರ ಪೋಷಕರು ಸೀಟು ಉಳಿಸಿಕೊಳ್ಳಲು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ, ಜಾರ್ಖಂಡ್ ಕಾನೂನು ಸೇವಾ ಪ್ರಾಧಿಕಾರ ಮತ್ತು ಮದ್ರಾಸ್ ಹೈಕೋರ್ಟ್ ಸಂಪರ್ಕಿಸಿದ್ದರು.
ಪರೀಕ್ಷೆ ನಡೆಸಿದ್ದು ಐಐಟಿ ಮದ್ರಾಸ್. ಹೀಗಾಗಿ, ನೆರವು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಪ್ರಾಧಿಕಾರ ತಿಳಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿತ್ತು.
ಅರ್ಜಿ ವಿಚಾರಣೆ ವೇಳೆ, 'ಅತುಲ್ ಕುಮಾರ್, ಎರಡನೇ ಮತ್ತು ಕೊನೆಯ ಪ್ರಯತ್ನದಲ್ಲಿ ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸುಪ್ರೀಂ ಕೋರ್ಟ್ ಅವರ ನೆರವಿಗೆ ಬರದಿದ್ದಲ್ಲಿ, ಈ ಪರೀಕ್ಷೆ ತೆಗೆದುಕೊಳ್ಳಲು ಮತ್ತೊಂದು ಅವಕಾಶ ಅವರಿಗೆ ಸಿಗುವುದಿಲ್ಲ' ಎಂದು ಪೀಠಕ್ಕೆ ಅತುಲ್ ಕುಮಾರ್ ಪರ ವಕೀಲರು ತಿಳಿಸಿದರು.
'ಐಐಟಿ-ಧನಬಾದ್‌ನಲ್ಲಿ ಸೀಟು ಹಂಚಿಕೆಯಾಗಿರುವ ಕುರಿತು ತಿಳಿಸಿದ ನಾಲ್ಕು ದಿನಗಳ ಒಳಗಾಗಿ, ಅಂದರೆ ಜೂನ್ 24ರೊಳಗೆ ₹17,500 ಶುಲ್ಕ ಪಾವತಿಸುವುದು ವಿದ್ಯಾರ್ಥಿಗಳಿಗೆ ಕಷ್ಟದ ಕೆಲಸವಾಗಿತ್ತು' ಎಂದು ಯುವಕನ ಹಣಕಾಸು ಪರಿಸ್ಥಿತಿಯ ಬಗ್ಗೆ ವಕೀಲರು ಪೀಠಕ್ಕೆ ತಿಳಿಸಿದರು.
ವಾದಗಳನ್ನು ಆಲಿಸಿದ ನ್ಯಾಯಪೀಠ, ಐಐಟಿ ಪ್ರವೇಶ ಪರೀಕ್ಷೆ ನಡೆಸುವ ಐಐಟಿ ಮದ್ರಾಸ್ ಹಾಗೂ ಜಂಟಿ ಸೀಟು ಹಂಚಿಕೆ ಪ್ರಾಧಿಕಾರಕ್ಕೆ ನೋಟಿಸ್‌ಗಳನ್ನು ಜಾರಿ ಮಾಡಿತು.
ಅತುಲ್ ಕುಮಾರ್‌ಗೆ ನೆರವು ನೀಡುವುದಕ್ಕೆ ಆಗುವುದಿಲ್ಲ ಎಂಬ ಬಗ್ಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವೂ ತಿಳಿಸಿತ್ತು.
ಜಾರ್ಖಂಡನ ಕೇಂದ್ರವೊಂದರಲ್ಲಿ ಕುಮಾರ್, ಜೆಇಇ ಪರೀಕ್ಷೆಗೆ ತರಬೇತಿ ಪಡೆದಿದ್ದರು. ಹೀಗಾಗಿ, ಅವರು ಈ ಸಂಬಂಧ ಜಾರ್ಖಂಡ ಕಾನೂನು ಸೇವೆಗಳ ಪ್ರಾಧಿಕಾರವನ್ನೂ ಸಂಪರ್ಕಿಸಿದ್ದರು.