ಬದಿಯಡ್ಕ: ಬದಿಯಡ್ಕಪೇಟೆಯ ವಿವಿಧ ಪ್ರದೇಶಗಳಲ್ಲಿ ದಾರಿ ಸೂಚಕ ಫಲಕ ಅಳವಡಿಸುವ ಮೂಲಕ ಇಲ್ಲಿನ ಆಟೋ ಚಾಲಕರ ಸಂಘವೊಂದು ಮಾದರಿಯಾಗಿದೆ. ಪೇಟೆಯಲ್ಲಿ ನಿತ್ಯ ಸಂಚರಿಸುವ ವಾಹನಗಳಿಗೆ ವಿವಿಧ ಪ್ರದೇಶಗಳಿಗೆ ತೆರಳುವ ರಸ್ತೆಗಳ ಬಗ್ಗೆ ಮಾಹಿತಿಯಿದ್ದರೂ, ಹೊರಗಿಂದ ಬರುವ ಚಾಲಕರು ಗೊಂದಲಕ್ಕೊಳಗಾಗುತ್ತಿರುವುದು ಸಾಮಾನ್ಯವಾಗಿದೆ.
ಬದಿಯಡ್ಕದ ಮುಖ್ಯ ಜಂಕ್ಷನ್‍ನಿಂದ ಪೆರ್ಲ-ಪುತ್ತೂರು, ಚೆರ್ಕಳ-ಕಾಸರಗೋಡು, ಸೀತಾಂಗೋಳಿ-ಕುಂಬಳೆ, ಮೇಲಿನ ಪೇಟೆಯಲ್ಲಿ ನಾರಂಪಾಡಿ-ಮುಳ್ಳೇರಿಯ, ನೇರಪ್ಪಾಡಿ-ಏತಡ್ಕ ಪ್ರದೇಶಗಳಿಗೆ ಸಂಚರಿಸುವ ಬಗ್ಗೆ ಸೂಕ್ತ ಮಾಹಿತಿಯಿಲ್ಲದೆ, ವಾಹನ ಚಾಲಕರು ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ. ಬಹುತೇಕ ಸಂದರ್ಭ ಚಾಲಕರು ಸಾರ್ವಜನಿಕರಿಂದ ಮಾಹಿತಿ ಅರಸುತ್ತಾ ಸಾಗಬೇಕಾದ ಪರಿಸ್ಥಿತಿಯಿದೆ.
ಬದಿಯಡ್ಕ ಪೇಟೆಯ ಫ್ರೆಂಡ್ಸ್ ಆಟೋ ಚಾಲಕರು ಪೇಟೆಯ ವಿವಿಧ ಪ್ರದೇಶಗಳಲ್ಲಿ ಸೂಚನಾ ಫಲಕ ಅಳವಡಿಸಿ ವಾಹನ ಚಾಲಕರಲ್ಲಿನ ಗೊಂದಲ ನಿವಾರಣೆಗೆ ಸಹಾಯ ಮಾಡಿದ್ದಾರೆ. ಸ್ಥಳಪರಿಚಯವಿಲ್ಲದ ವಿವಿಧ ಪ್ರದೇಶಗಳಿಗೆ ತೆರಳಿದಾಗ ಚಾಲಕರು ಹೆಚ್ಚಿನ ಸಂಕಷ್ಟ ಪಡಬೇಕಾಗುತ್ತದೆ. ರಾತ್ರಿ ಕಾಲದಲ್ಲಿ ಜಾಗದ ಬಗ್ಗೆ ಮಾಹಿತಿ ಪಡೆಯಲು ಅಲ್ಲಿ ಯಾರೂ ಇರುವುದಿಲ್ಲ. ಕೆಲವು ಸಂದರ್ಭ ಗೊತ್ತುಗುರಿಯಿಲ್ಲದ ಪ್ರದೇಶಗಳಿಗೆ ತೆರಳಿ, ನಾವೂ ಸಮಸ್ಯೆ ಎದುರಿಸಿದ್ದುಂಟು. ಇವೆಲ್ಲವನ್ನು ಗಮನದಲ್ಲಿರಿಸಿ ಪೇಟೆಯ ವಿವಿಧೆಡೆ ಸೂಚನಾಫಲಕ ಅಳವಡಿಸಲು ತೀರ್ಮಾನಿಸಿರುವುದಾಗಿ ಬದಿಯಡ್ಕದ ಫ್ರೆಂಡ್ಸ್ ಅಟೋ ಚಾಲಕರ ಸಂಘದ ಪದಾಧಿಕಾರಿಗಳು ತಿಳಿಸುತ್ತಾರೆ.