ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನ ಕೊಲೆಗೈದ ಪ್ರಕರಣದ ಅಪರಾಧಿ, ಉಪ್ಪಳ ಪೋಸೋಟ್ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ(ತೃತೀಯ)ದ ನ್ಯಾಯಾಧೀಶ ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ಎರಡನೇ ಆರೋಪಿ ಹಾರೂನ್ ರಶೀದ್ ತಲೆಮರೆಸಿಕೊಂಡಿದ್ದರೆ, ಮೂರನೇ ಆರೋಪಿ ಮಹಮ್ಮದ್‍ಕುಞÂ ಈ ಹಿಂದೆ ಮೃತಪಟ್ಟಿದ್ದಾನೆ. ಉಪ್ಪಳ ಹಿದಾಯತ್‍ನಗರ ನಿವಾಸಿ ಸಮೀರ್ ಯಾನೆ ಜಿಮ್ಮಿ(26)ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ಶಿಕ್ಷೆ.
2008 ಆಗಸ್ಟ್ 24ರಂದು ಉಪ್ಪಳ ಪೊಸೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಊರನ್ನೇ ಬೆಚ್ಚಿಬೀಳಿಸುವ ರೀತಿಯಲ್ಲಿ ಕೊಲೆ ಕೃತ್ಯ ನಡೆದಿತ್ತು. ಸಮೀರ್ ಯಾನೆ ಜಿಮ್ಮಿ ಅವರ ಸ್ನೇಹಿತ, ಕೀಯೂರಿನ ಮುನೀರ್ ಎಂಬಾತ ನೆರೆಮನೆ ನಿವಾಸಿಯಾಗಿರುವ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು, ಅಲ್ಲದೆ ಈಕೆಯನ್ನು ವಿವಾಹವಾಗಲೂ ಯೋಜನೆ ಹಾಕಿಕೊಂಡಿದ್ದನು. ಇದನ್ನು ಯುವತಿ ಮನೆಯವರು ವಿರೋಧಿಸಿದ್ದರು. ವಿರೋಧದ ನಡುವೆ ಯುವತಿಯನ್ನು ಕುಂಜತ್ತೂರಿನಲ್ಲಿರುವ ಸಹೋದರಿ ಮನೆಯಲ್ಲಿ ಮುನೀರ್ ವಿವಾಹವಾಗಿದ್ದಾನೆ. ಮದುವೆಗೆ ಸಮೀರ್ ಎಲ್ಲ ರೀತಿಯ ಸಹಾಯ ಒದಗಿಸಿರುವುದಾಗಿ ಆರೋಪಿಸಿ ಯುವತಿ ಮನೆಯವರು ಸಮೀರ್ ಜತೆ ದ್ವೇಷ ಕಟ್ಟಿಕೊಂಡಿದ್ದು, ಇದುವೇ ಕೊಲೆಗೆ ಕಾರಣವಾಗಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ವ್ಯಕ್ತವಾಗಿತ್ತು.
ಕೊಲೆ ಕೃತ್ಯದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಅಬೂಬಕ್ಕರ್ ಸಿದ್ದೀಕ್‍ನನ್ನು 2012ರಲ್ಲಿ ಕುಂಬಳೆಯ ಅಂದಿನ ಸಿ.ಐ ಟಿ.ಪಿ ರಂಜಿತ್ ಬಂಧಿಸಿದ್ದು, ಸ್ಟೇಟ್ ಸ್ಪೆಶ್ಯಲ್ ಬ್ರಾಂಚ್ ಡಿವೈಎಸ್‍ಪಿಯಾಗಿದ್ದ ಸಿಬಿ ಥಾಮಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.