ನ್ಯೂಯಾರ್ಕ್ : ಭಾರತ ಮತ್ತು ಚೀನಾ ಸಂಬಂಧವು ವಿಶ್ವದ ಭವಿಷ್ಯದ ಮೇಲೆ ಪ್ರಭಾವ ಬೀರಲಿದೆ. ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ಮುಂದುವರಿಯಬೇಕಾದರೆ ಮೊದಲು ಗಡಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದರು.
ಏಷ್ಯಾ ಸೊಸೈಟಿ ಹಾಗೂ ಏಷ್ಯಾ ಸೊಸೈಟಿ ನೀತಿ ಸಂಸ್ಥೆಯು ಮಂಗಳವಾರ ನ್ಯೂಯಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ 'ಭಾರತವು ಚೀನಾದೊಂದಿಗೆ ಕ್ಲಿಷ್ಟಕರ ಇತಿಹಾಸವನ್ನು ಹೊಂದಿದೆ. ಎರಡೂ ರಾಷ್ಟ್ರಗಳ ಸಮನಾಂತರ ಬೆಳವಣಿಗೆಯು ತುಂಬಾ ವಿಶಿಷ್ಟ ಸಮಸ್ಯೆಯನ್ನು ತಂದೊಡ್ಡಿದೆ' ಎಂದರು.
'ಏಷ್ಯಾದ ಭವಿಷ್ಯದ ವಿಷಯದಲ್ಲಿ ಭಾರತ- ಚೀನಾ ಸಂಬಂಧವು ಪ್ರಮುಖ ಅಂಶವಾಗಿದೆ ಎಂದು ನಾನು ಭಾವಿಸುತ್ತೇನೆ. ಪ್ರಪಂಚವು ಧ್ರುವೀಕರಣಗೊಂಡರೆ ಏಷ್ಯಾವೂ ಅದೇ ರೀತಿಯಾಗಿರಬೇಕು. ಹೀಗಾಗಿ ಈ ಸಂಬಂಧವು ಕೇವಲ ಏಷ್ಯಾ ಮಾತ್ರವಲ್ಲದೇ ವಿಶ್ವದ ಭವಿಷ್ಯದ ಮೇಲೂ ಪ್ರಭಾವ ಬೀರಲಿದೆ' ಎಂದರು.
'ವಿಶ್ವದಲ್ಲಿ 100 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತ ಮತ್ತು ಚೀನಾ ರಾಷ್ಟ್ರಗಳು ಅಕ್ಕಪಕ್ಕದಲ್ಲಿಯೇ ಇವೆ. ಜಾಗತಿಕವಾಗಿ ಎರಡೂ ರಾಷ್ಟ್ರಗಳು ಮುಂದುವರಿಯುತ್ತಿವೆ. ಇವು ಪರಸ್ಪರ ಗಡಿಯನ್ನು ಹಂಚಿಕೊಂಡಿವೆ. ಹೀಗಾಗಿ ಇದು ನಿಜಕ್ಕೂ ಕ್ಲಿಷ್ಟಕರ ಸಮಸ್ಯೆಯಾಗಿದೆ. ಭಾರತ ಮತ್ತು ಚೀನಾ ನಡುವಿನ 3,500 ಕಿ.ಮೀ ಗಡಿಯು ವಿವಾದದಲ್ಲಿದೆ. ಗಡಿಯಲ್ಲಿ ಶಾಂತಿ ಇದ್ದರೆ ಉಳಿದ ಸಂಬಂಧಗಳು ಉತ್ತಮವಾಗಿರುತ್ತವೆ' ಎಂದು ತಿಳಿಸಿದರು.