ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಮ್‌ನ ಮನೆಯೊಂದರ ವಾಷಿಂಗ್ ಮೆಷಿನ್‌ನಲ್ಲಿ ಮೂರು ವರ್ಷದ ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ಕೊಲೆ ಆರೋಪದಡಿ ನೆರೆಮನೆಯ 40 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಮಗು ಸಂಜಯ್‌ನನ್ನು ಹತ್ಯೆ ಮಾಡಿ ಮೃತದೇಹವನ್ನು ವಾಷಿಂಗ್ ಮೆಷಿನ್‌ನಲ್ಲಿ ಬಚ್ಚಿಟ್ಟಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿಗೆ ತೆರಳುವ ಮುನ್ನ ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಸೋಮವಾರ ನಾಪತ್ತೆಯಾಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಪೋಷಕರು, ನೆರೆಹೊರೆಯವರ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.
'ಎರಡು ಮನೆಯವರ ನಡುವೆ ಹಲವು ವರ್ಷಗಳಿಂದ ಭೂಮಿ ವಿವಾದ ಇತ್ತು. ಮಗು ನಾಪತ್ತೆಯಾದ ಹಿನ್ನೆಲೆಯಲ್ಲಿ ಆರೋಪಿ ಮನೆಯಲ್ಲಿ ಹುಡುಕಾಟ ನಡೆಸುವ ವೇಳೆ ವಾಷಿಂಗ್ ಮೆಷಿನ್‌ನಲ್ಲಿ ಸಂಜಯ್ ಅವರ ಮೃತದೇಹ ಪತ್ತೆಯಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
'ಆರೋಪಿ ಮಹಿಳೆಯ ಮಗ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಇದರಿಂದ ಮಾನಸಿಕವಾಗಿ ನೊಂದಿದ್ದ ಆಕೆಯು, ನೆರೆಮನೆಯ ಬಾಲಕನು ಜೀವಂತವಾಗಿ ಇರಬಾರದು ಎಂದು ಭಾವಿಸಿ ಕೊಲೆ ಮಾಡಿದ್ದಾಳೆ' ಎನ್ನಲಾಗಿದೆ.
ಘಟನೆ ಸಂಬಂಧ ಮಹಿಳೆಯನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀರ್ಘಕಾಲದ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಘಟನೆ ತಿಳಿದ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.