ನವದೆಹಲಿ: ಈ ಬಾರಿ ದೇಶದಲ್ಲಿ ಬೇಸಿಗೆಯ ಬಿಸಿ, ಮುಂಗಾರಿನ ಮಳೆ ಹಿಂದೆಂದಿಗಿಂತ ಅಧಿಕವಾಗಿಯೇ ದಾಖಲಾಗಿದೆ. ಅದರ ಜತೆಗೆ ಈ ಬಾರಿ ದೇಶದಲ್ಲಿ ಚಳಿಯೂ ಅಧಿಕವಾಗಿಯೇ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಲಾ ನಿನಾ ವಿದ್ಯಮಾನವನ್ನು ಆರಂಭದಿಂದ ಗಮನಿಸಿ, ಇದು ರಾಷ್ಟ್ರದಾದ್ಯಂತ ಹೆಚ್ಚಿದ ಮಳೆ ಮತ್ತು ತಾಪಮಾನದಲ್ಲಿ ಗಮನಾರ್ಹ ಕುಸಿತವನ್ನು ಉಂಟುಮಾಡಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಪ್ರಮಾಣದ ತಾಪಮಾನ ದಾಖಲಾಗಲಿದ್ದು, ಪರಿಣಾಮವೂ ವಿಭಿನ್ನವಾಗಿರಲಿದೆ. ಅಂದರೆ ಕೆಲವು ಪ್ರದೇಶಗಳಲ್ಲಿ ಅತಿಯಾದ ಚಳಿ ಇರಲಿದ್ದು, ಇನ್ನು ಕೆಲವೆಡೆ ಮಧ್ಯಮ ಪ್ರಮಾಣದಲ್ಲಿ ಶೀತ ವಾತಾವರಣ ಇರಲಿದೆ ಎಂದು ಇಲಾಖೆ ಹೇಳಿದೆ.
ಉತ್ತರ ಭಾರತದ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ತಾಪಮಾನ ತೀವ್ರವಾಗಿ ಕುಸಿತವಾಗಲಿದ್ದು, 3 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಇದರ ಜೊತೆಗೆ ಮಳೆ ಸುರಿಯುವ ಸಂಭವವೂ ಹೆಚ್ಚಾಗಿದೆ. ಈ ರೀತಿಯ ಹವಾಮಾನ ಚಳಿಗಾಲದ ಕೃಷಿ ಇರುವ ಪ್ರದೇಶಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಹವಾಮಾನದಲ್ಲಿ ಉಂಟಾಗಬಹುದಾದ ವೈಪರೀತ್ಯದ ಕಾರಣದಿಂದ ಚಳಿಗಾಲಕ್ಕೆ ಅಗತ್ಯವಿರುವ ಬೆಚ್ಚಗಿನ ಬಟ್ಟೆ, ಹೀಟರ್‌ಗಳು ಸೇರಿದಂತೆ ಚಳಿಗೆ ಅಗತ್ಯವಿರುವ ವಸ್ತುಗಳನ್ನು ಮುಂಚೆಯೇ ಖರೀದಿಸಿಟ್ಟುಕೊಳ್ಳಿ, ಹವಾಮಾನ ಬದಲಾವಣೆಯ ವರದಿಯನ್ನು ಗಮನಿಸುತ್ತಿರಿ ಎಂದು ಜನರಿಗೆ ಇಲಾಖೆ ಸಲಹೆ ನೀಡಿದೆ.
ಪೆಸಿಫಿಕ್ ಪ್ರದೇಶದ ಮೇಲ್ಮೈನಲ್ಲಿ ಕಡಿಮೆ ತಾಪಮಾನದಿಂದಾಗಿ ಲಾ ನಿನಾ ವಿದ್ಯಮಾನವು ಸಂಭವಿಸುತ್ತದೆ, ಇದು ಮಳೆ ಮತ್ತು ತೀವ್ರ ಚಳಿಗಾಲದಂತಹ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಲಾ ನಿನಾ ಏಪ್ರಿಲ್ ಮತ್ತು ಜೂನ್‌ನಲ್ಲಿ ಆರಂಭವಾಗಿ, ಅಕ್ಟೋಬರ್‌ನಿಂದ ಫೆಬ್ರುವರಿ ತಿಂಗಳಲ್ಲಿ ತೀವ್ರಗೊಳ್ಳುತ್ತದೆ. ಈ ಬಾರಿ ಲಾ ನಿನಾ ಮಳೆಗಾಲದಲ್ಲಿಯೇ ತನ್ನ ಪ್ರಭಾವವನ್ನು ತೋರಿದೆ. ಅದಕ್ಕೆ ಉದಾಹರಣೆ ಎಂದರೆ ದೇಶದಲ್ಲಿ ಮಳೆಗಾಲ ಇನ್ನೂ ಮುಂದುವರಿದಿರುವುದು.
ಲಾ ನಿನಾ ವಿದ್ಯಮಾನವು ಪೂರ್ವದ ಮಾರುತಗಳಿಂದ ತಳ್ಳಲ್ಪಡುತ್ತದೆ, ಇದು ಸಮುದ್ರದ ನೀರನ್ನು ಪಶ್ಚಿಮಕ್ಕೆ ತಳ್ಳುತ್ತದೆ, ಇದರಿಂದ ಸಮುದ್ರದ ಮೇಲ್ಮೈಯನ್ನು ತಂಪಾಗಿಸುತ್ತದೆ.