ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ ಇಬ್ರಾಹಿಂ ಮುಂಡಿತ್ತಡ್ಕ ಆಯ್ಕೆಯಾಗಿದ್ದಾರೆ.
ಬ್ಲಾಕ್ ಪಂಚಾಯತಿ ಕೇಂದ್ರ ಕಚೇರಿಯಲ್ಲಿ ನಡೆದ ಪಂಚಾಯತಿ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಇಬ್ರಾಹಿಂ ಮುಂಡಿತ್ತಡ್ಕ ಪುತ್ತಿಗೆ ಪಂಚಾಯತಿ ವ್ಯಾಪ್ತಿಯ ಮಣಿಯಂಪಾರೆ ನಿವಾಸಿಯಾಗಿ ಸಮಾಜ ಸೇವೆ ಮತ್ತು ಪರೋಪಕಾರದಲ್ಲಿ ವಿಶಿಷ್ಟವಾದ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಎಂ.ಎಸ್.ಎಫ್. ವಿದ್ಯಾರ್ಥಿ ರಾಜಕೀಯದ ಮೂಲಕ ಸಾರ್ವಜನಿಕ ಕ್ಷೇತ್ರವನ್ನು ಪ್ರವೇಶಿಸಿದ ಇಬ್ರಾಹಿಂ ಸಮಸ್ತ ಕೇರಳ ಸುನ್ನಿ ಬಾಲವೇದಿಯ ರಾಜ್ಯ ಕಾರ್ಯದರ್ಶಿ ಮತ್ತು ಸುನ್ನಿ ಮಹಲ್ ಫೆಡರೇಶನ್‍ನ ಜಿಲ್ಲಾ ಕಾರ್ಯದರ್ಶಿ ಮುಂತಾದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಪ್ರಸ್ತುತ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‍ನ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಶೈಕ್ಷಣಿಕ ಮತ್ತು ದತ್ತಿ ಕಾರ್ಯಗಳಿಗಾಗಿ ಕೆಲಸ ಮಾಡುವ ತಮರ್ ಅಬ್ದುಲ್ಲ ಮೆಮೋರಿಯಲ್ ಫೌಂಡೇಶನ್‍ನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಬ್ಲಾಕ್ ಪಂಚಾಯತಿಯ ಆರ್ಥಿಕ ಯೋಜನೆ ಪರಿಶೀಲನೆ, ಮೌಲ್ಯಮಾಪನ ಮತ್ತು ತಾಂತ್ರಿಕ ಬೆಂಬಲ ಸೇರಿದಂತೆ ಬ್ಲಾಕ್ ಪಂಚಾಯತ್‍ನಲ್ಲಿ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಮಾರ್ಗದರ್ಶನ ನೀಡುವುದು ಉಪಾಧ್ಯಕ್ಷರ ಮುಖ್ಯ ಜವಾಬ್ದಾರಿಗಳಾಗಿವೆ.