ಕಾಸರಗೋಡು: ಅಮೀಬಿಕ್ ಮೆನಿಂಜೈಟಿಸ್ ರೋಗದ ಬಗ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ರೋಗದ ಬಗ್ಗೆ ಸಾಮಾನ್ಯ ಸೂಚನೆ ಪಾಲಿಸುವುದರ ಜತೆಗೆ ಜಾಗ್ರತೆ ಪಾಲಿಸುವುದು ಅಗತ್ಯ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಜಿಲ್ಲೆಯ ಚಟ್ಟಂಚಾಲಿನ ಯುವಕ ಅಮೀಬಿಕ್ ಮೆನಿಂಜೈಟಿಸ್ ಮೃತಪಟ್ಟಿರುವುದು ಖಚಿತವಾಗಿಲ್ಲವಾದರೂ, ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡಿಎಂಒ ಡಾ. ಎ.ವಿ.ರಾಮದಾಸ್ ಅವರ ಮಾಹಿತಿ ಪ್ರಕಾರ ಮೃತಪಟ್ಟ ಯುವಕ ಕಾಸರಗೋಡು ಮೂಲದವರಾಗಿದ್ದು, ಕಳೆದ ಹತ್ತು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಇವರು ಸೆಪ್ಟೆಂಬರ್ ಮೊದಲ ವಾರದಲ್ಲಿ ಕಾಸರಗೋಡಿಗೆ ಬಂದಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 4 ದಿನಗಳ ನಂತರ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ನಂತರ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸೆಪ್ಟೆಂಬರ್ 22 ರಂದು ನಿಧನರಾಗಿದ್ದರು. ಮೃತ ವ್ಯಕ್ತಿ ಮುಂಬೈನಿಂದ ರೋಗಕ್ಕೆ ತುತ್ತಾಗಿರುವುದರಿಂದ, ಈ ಮೂಲದಿಂದ ಹರಡುವ ಸಾಧ್ಯತೆ ಕಡಿಮೆಯಿದೆ. ಜನತೆ ರೋಗಬರದಂತೆ ಸಾಮಾನ್ಯ ಸೂಚನೆಗಳನ್ನು ಪಾಲಿಸಬೇಕು ಎಂದು ಡಾ. ಎ.ವಿ.ರಾಮದಾಸ್ ಮಾಹಿತಿ ನೀಡಿದ್ದಾರೆ.
ತೀವ್ರ ತಲೆನೋವು, ಜ್ವರ, ವಾಕರಿಕೆ, ವಾಂತಿ, ಕುತ್ತಿಗೆ ತಿರುಗುವುದು, ಬೆಳಕನ್ನು ನೋಡಲು ಕಷ್ಟಸಾಧ್ಯವಾಗುವುದು ರೋಗದ ಪ್ರಮುಖ ಲಕ್ಷಣಗಳಾಗಿವೆ. ಕಲುಷಿತ ಹಾಗೂ ನಿಂತ ನೀರಿನಲ್ಲಿ ಸ್ನಾನ ಮಾಡುವುದನ್ನು ಮತ್ತು ಅಶುದ್ಧ ನೀರಿನಿಂದ ಮುಖ ಮತ್ತು ಬಾಯಿಯನ್ನು ತೊಳೆಯುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ತಜ್ಷರಿಂದ ಚಿಕಿತ್ಸೆ ಪಡೆಯಬೇಕು ಎಂದೂ ಸೂಚಿಸಲಾಗಿದೆ.