ನವದೆಹಲಿ: ಭೌಗೋಳಿಕ ಗಡಿಯನ್ನು ಮೀರಿ ವ್ಯಾಪಿಸುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ಹಾಗೂ ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ರಾಜ್ಯಗಳ ನಡುವೆ ಸಮನ್ವಯವನ್ನು ಉತ್ತಮಗೊಳಿಸಲು ಸೈಬರ್ ಅಪರಾಧಿಗಳ 'ಶಂಕಿತರ ನೋಂದಣಿ ಕೇಂದ್ರ' ಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಆನ್‌ಲೈನ್ ಮೂಲದ ಆರ್ಥಿಕ ಅಪರಾಧ ತಡೆಯಲು ಅನಿಯಮಿತವಾಗಿ ಸಹಕಾರ ನೀಡುವುದು ಇದರ ಗುರಿ. ಈ ಕೇಂದ್ರ ಸೈಬರ್ ಅಪರಾಧ ಕುರಿತ ಸಮಗ್ರ ಅಂಕಿ ಅಂಶಗಳನ್ನು ಹೊಂದಿರಲಿದೆ. ಮುಂದಿನ ಐದು ವರ್ಷಗಳಲ್ಲಿ ಐದು ಸಾವಿರ ಮಂದಿ ತರಬೇತಿ ಪಡೆದ ಸೈಬರ್ ಕಮಾಂಡೊಗಳನ್ನು ಕೇಂದ್ರಕ್ಕೆ ನಿಯೋಜಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಮಂಗಳವಾರ ಇಲ್ಲಿ ನಡೆದ 'ಭಾರತೀಯ ಸೈಬರ್ ಅಪರಾಧ ಸಹಕಾರ ಕೇಂದ್ರ' ಅಥವಾ '14ಸಿ'ಯ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಇದು ಸೇರಿದಂತೆ ನಾಲ್ಕು ಕಾರ್ಯಕ್ರಮಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಕಟಿಸಿದರು.
'ಸೈಬರ್ ಭದ್ರತೆಯು ದೇಶದ ಆಂತರಿಕ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಶ್ನೆ. ಇದು, ಡಿಜಿಟಲ್ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಡಿಜಿಟಲ್ ಆಸ್ತಿ ಭದ್ರಪಡಿಸಿಕೊಳ್ಳದೇ ದೇಶದ ಪ್ರಗತಿ ಅಸಾಧ್ಯ' ಎಂದು ಶಾ ಹೇಳಿದರು.
'ಜಾಗತಿಕ ಡಿಜಿಟಲ್ ವಹಿವಾಟಿನ ಶೇ 46ರಷ್ಟು ಪ್ರಕ್ರಿಯೆಗಳು ಈಗ ಭಾರತದಲ್ಲಿಯೇ ನಡೆಯುತ್ತವೆ. ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ಎಲ್ಲ ಭಾಗೀದಾರರು, ಗಡಿಗಳನ್ನು ಮೀರಿ ಒಂದುಗೂಡಬೇಕಾಗಿದೆ' ಎಂದರು.
ಆನ್‌ಲೈನ್ ಮೂಲಕ ನಗದು ವಂಚನೆ, ಸುಳ್ಳು ಸುದ್ದಿ ಹರಡುವಿಕೆ, ಮಹಿಳೆಯರು ಹಾಗೂ ಮಕ್ಕಳನ್ನು ನಿಂದಿಸುವ ಪ್ರವೃತ್ತಿ ಸೇರಿದಂತೆ ಸೈಬರ್ ಅಪರಾಧಿಗಳ ಒಟ್ಟು ಕಾರ್ಯಶೈಲಿಯನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು (ಎ.ಐ) ಬಳಸಿಕೊಳ್ಳಬೇಕಾದ ಅಗತ್ಯವನ್ನು ಗೃಹಸಚಿವರು ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಸೈಬರ್ ಅಪರಾಧ ಕುರಿತ ಶಂಕಿತ ಮಾಹಿತಿಗಳನ್ನು ಈಗಾಗಲೇ ಹಲವು ರಾಜ್ಯಗಳು ಹೊಂದಿವೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಸಮಗ್ರವಾಗಿ ಇದು ಲಭ್ಯ ಇಲ್ಲ. ಈ ಸ್ಥಿತಿಯು, ಪರಿಣಾಮಕಾರಿಯಾದ ಕಾರ್ಯಾಚರಣೆಗೂ ತೊಡಕಾಗಿದೆ. ರಾಷ್ಟ್ರಮಟ್ಟದಲ್ಲಿ ಸಮಾನ ವೇದಿಕೆ ಬೇಕಾಗಿದೆ ಎಂಬ ಕಾರಣಕ್ಕೆ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಅಧಿಕೃತ ಹೇಳಿಕೆ ಪ್ರಕಾರ, ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ಆಧರಿಸಿ ಶಂಕಿತರ ನೋಂದಣಿ ಮಾಹಿತಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮದಡಿ ಸೈಬರ್ ಕಮಾಂಡೊಗಳ ವಿಶೇಷ ಘಟಕವು ಇರಲಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ ಘಟಕ ಸ್ಥಾಪನೆಯಾಗಲಿದೆ. ದೇಶದಾದ್ಯಂತ ಸೈಬರ್ ಭದ್ರತೆಗೆ ಎದುರಾಗುವ ಬೆದರಿಕೆಯನ್ನು ಎದುರಿಸುವುದು ಇದರ ಗುರಿ. ತರಬೇತಿ ಪಡೆದ ಸೈಬರ್ ಕಮಾಂಡೊಗಳು ಡಿಜಿಟಲ್ ಭದ್ರತೆಗೆ ಸಂಬಂಧಿಸಿ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ನೆರವು ಒದಗಿಸುವರು ಎಂದು ಹೇಳಿಕೆಯು ವಿವರಿಸಿದೆ.
'ಈಗ 'ಅಗತ್ಯವಿದ್ದರೆ ಮಾಹಿತಿ ಪಡೆಯಿರಿ' ಎಂಬ ನಿಲುವಿತ್ತು. ಈಗ 'ಮಾಹಿತಿ ಹಂಚಿಕೊಳ್ಳುವುದು ಕರ್ತವ್ಯ'ವಾಗಲಿದೆ. ಸಮನ್ವಯ ವೇದಿಕೆಯು ಈ ಕಾರ್ಯವನ್ನು ನಿಭಾಯಿಸಲಿದೆ' ಎಂದು ಅಮಿತ್ ಶಾ ಹೇಳಿದರು.
ನವದೆಹಲಿಯಲ್ಲಿ ಸೈಬರ್ ವಂಚನೆ ನಿಯಂತ್ರಣ ಕೇಂದ್ರ (ಸಿಎಫ್‌ಎಂಸಿ) ಸ್ಥಾಪಿಸಲಾಗಿದೆ. ಇದರಲ್ಲಿ ಎಲ್ಲ ಪ್ರಮುಖ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಪಾವತಿ ವೇದಿಕೆಗಳು, ಟೆಲಿಕಾಂ ಸೇವಾದಾರ ಸಂಸ್ಥೆಗಳು, ಐ.ಟಿ ಸೇವಾ ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳ ಪ್ರತಿನಿಧಿಗಳಿದ್ದಾರೆ ಎಂದು ಶಾ ಇದೇ ವೇಳೆ ಉಲ್ಲೇಖಿಸಿದರು.