ಕೊಲ್ಲಂ : ಖ್ಯಾತ ಚಲನಚಿತ್ರ ನಿರ್ದೇಶಕ ವಿ.ಕೆ ಪ್ರಕಾಶ್ ಅವರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕಾಶ್ ಅವರನ್ನು ಎರಡು ದಿನಗಳ ಕಾಲ ವಿಚಾರಣೆಗೆ ಗುರಿಪಡಿಸಿದ್ದ ಪಳ್ಳಿತೋಟ್ಟಂ ಪೊಲೀಸರು ಹೈಕೋರ್ಟ್‌ನ ನಿರ್ದೇಶನಕ್ಕೆ ಅನುಗುಣವಾಗಿ ಜಾಮೀನು ನೀಡಿದ್ದಾರೆ.
ಪ್ರಕಾಶ್ ಅವರು 2022ರ ಏಪ್ರಿಲ್‌ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಈ ಮಹಿಳೆಯು ಚಿತ್ರಕಥೆಗಳಿಗೆ ಬರೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಚಿತ್ರಕಥೆಯನ್ನು ವಿವರಿಸಲು ಪ್ರಕಾಶ್ ಬಳಿ ತೆರಳಿದ್ದ ಸಂದರ್ಭದಲ್ಲಿ ಈ ದೌರ್ಜನ್ಯ ನಡೆದಿತ್ತು ಎಂದು ಮಹಿಳೆ ಆರೋಪ ಮಾಡಿದ್ದಾರೆ.
ನ್ಯಾಯಮೂರ್ತಿ ಕೆ.ಹೇಮಾ ಸಮಿತಿಯ ವರದಿಯು ಬಹಿರಂಗವಾದ ನಂತರದಲ್ಲಿ ಈ ಮಹಿಳೆಯು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಈ ಆರೋಪಗಳನ್ನು ಪ್ರಕಾಶ್ ಅವರು ಖಂಡಿಸಿದ್ದು, ಕಥೆಯು ಸಿನಿಮಾ ಮಾಡಲು ಸೂಕ್ತವಾಗಿಲ್ಲ ಎಂದು ಆ ಮಹಿಳೆಗೆ ಹೇಳಿದ ನಂತರ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.
ನ್ಯಾಯಾಲಯ ವಿಧಿಸುವ ಕಠಿಣ ಷರತ್ತುಗಳನ್ನು ಪಾಲಿಸಲು ಹಾಗೂ ತನಿಖಾಧಿಕಾರಿಯ ಜೊತೆ ಸಹಕರಿಸಲು ಆರೋಪಿಯು ಸಿದ್ಧವಿರುವಾಗ ಅವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸುವ ಅಗತ್ಯ ಇಲ್ಲ ಎಂದು ಕೇರಳ ಹೈಕೋರ್ಟ್ ಜಾಮೀನು ನೀಡುವಾಗ ಹೇಳಿದೆ. ಜೊತೆಗೆ ಅಗತ್ಯವಿದ್ದರೆ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಚಾರಣೆ ನಡೆಸಬೇಕು ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.