ಲಖನೌ: ಉತ್ತರ ಪ್ರದೇಶದ ಕಾನ್ಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಳಿ ಮಹಿಳೆಯ ರುಂಡವಿಲ್ಲದ ಬೆತ್ತಲೆ ಮೃತದೇಹ ಪತ್ತೆಯಾಗಿದೆ.
ಮೃತ ಮಹಿಳೆಯ ಗುರುತು ಪತ್ತೆಗಾಗಿ ತುಂಡರಿಸಿದ ತಲೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬುಧವಾರ ಕಾನ್ಪುರ ಬಳಿಯ ಗುಜೈನಿ ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬುಧವಾರ ಮುಂಜಾನೆ ಕೊಲೆಯಾದ ಮಹಿಳೆಯನ್ನೇ ಹೋಲುವವರೊಬ್ಬರು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿವುರುವುದು ಕಂಡು ಬಂದಿತ್ತು. ಮೃತದೇಹ ಅಂದೇ ಬೆಳಗ್ಗೆ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ ಮಹಿಳೆಯ ರುಂಡವನ್ನು ಬೇರ್ಪಡಿಸಿರುವ ಸಾಧ್ಯತೆ ಇದೆ. ಆಕೆಯ ಮೇಲೆ ಅತ್ಯಾಚಾರ ನಡೆದಿರಬಹುದೇ ಎಂಬ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ತಿಳಿದು ಬರಲಿದೆ. ಮಹಿಳೆಯನ್ನು ಬೇರೆಲ್ಲಿಯಾದರೂ ಕೊಂದು ಮೃತದೇಹವನ್ನು ಹೆದ್ದಾರಿಯಲ್ಲಿ ಎಸೆದು ಹೋಗಿರಬಹುದು ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಮೃತರ ಗುರುತನ್ನು ಮರೆಮಾಚಲು ತಲೆಯನ್ನು ಕತ್ತರಿಸಿರಬಹುದು. ಸಮೀಪದ ಪೊಲೀಸ್ ಠಾಣೆಗಳಲ್ಲಿ ಯಾವುದೇ ನಾಪತ್ತೆ ಪ್ರಕರಣ ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯ: ಬಿಜೆಪಿ ಮುಖಂಡರ ಮೇಲೆಯೇ ಹೆಚ್ಚು ಪ್ರಕರಣಸರ್ಕಾರದ ವಿರುದ್ಧ ಅಖಿಲೇಶ್ ವಾಗ್ದಾಳಿ:
ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಚುತ್ತಿರುವ ಇಂತಹ ಘೋರ ಅಪರಾಧದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.