ಕಾಸರಗೋಡು: ಮಾಲಿನ್ಯಮುಕ್ತ ನವಕೇರಳ ಜನಾಂದೋಲನ ಅಭಿಯಾನದ ಅಂಗವಾಗಿ ಅ. 2ರಂದು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನಡೆಯಲಿರುವ ಶುಚೀಕರಣ ಕಾರ್ಯದಲ್ಲಿ ಸಿವಿಲ್‍ಸ್ಟೇಶನ್‍ನ ಎಲ್ಲ ಸಿಬ್ಬಂದಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶ ನೀಡಿದರು.
ಕಾರ್ಯಕ್ರಮದ ಯಶಸ್ವಿಗಾಗಿ ಜಿಲ್ಲಾಧಿಕಾರಿ ಕಚೇರಿ ಮಿನಿ ಸಮ್ಮೇಳನ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿವಿಲ್ ಸ್ಟೇಷನ್ ಕ್ಯಾಂಟೀನ್‍ನಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ಆಹಾರಸಾಮಗ್ರಿ ಪೂರೈಸುವುದನ್ನು ಸ್ಥಗಿತಗೊಳಿಸಲಾಗುವುದು. ಪ್ರತಿ ಕಛೇರಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವಿಲೇವಾರಿ ನಡೆಸುವ ಹೊಣೆಗಾರಿಕೆ ಆಯಾ ಇಲಾಖೆಯವರಿಗೆ ಸೇರಿದ್ದಾಗಿರುತ್ತದೆ. ಆಹಾರ ತ್ಯಾಜ್ಯ, ಇತರ ಸಾವಯವ ಮತ್ತು ಅಜೈವಿಕ ತ್ಯಾಜ್ಯವನ್ನು ಹೆಚ್ಚು ಕಾಳಜಿ ವಹಿಸಿವಿಂಗಡಿಸಿ ನಿರ್ವಹಿಸಬೇಕು. ಜತೆಗೆ ಸಿಬ್ಬಂದಿ ಸಂತೋಷಾರ್ಥ ಸಿಹಿ ವಿತರಿಸುವಾಗ ಪೇಪರ್ ಬಾಕ್ಸ್‍ಗಳನ್ನು vಹೊರತುಪಡಿಸುವಂತೆ ನಿರ್ದೇಶಿಸಿದರು.
ಅಕ್ಟೋಬರ್ 2 ರಂದು ಜಿಲ್ಲಾ ಮಟ್ಟದ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ವಠಾರವನ್ನು ಜಿಪಂ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶುಚೀಕರಣಗೊಳಿಸಲಾಗುವುದು. ಈ ಸಂದರ್ಭ ಚಂದ್ರಗಿರಿ ಸರ್ಕಾರಿ ಹೈಯರ್ ಸಎಕೆಂಡರಿ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯ 64 ಶಾಲೆಗಳ ಹಸಿರು ಶಾಲೆಯ ಘೋಷಣೆಯೂ ನಡೆಯಲಿದೆ. ಜಿಲ್ಲೆಯ ಎಲ್ಲ 777 ವಾರ್ಡ್‍ಗಳನ್ನೂ ಕಸಮುಕ್ತಗೊಳಿಸಿ, ಇದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಾಗುವುದು
ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಸಹಾಯಕ ನಿರ್ದೇಶಕ ಜೈಸನ್ ಮ್ಯಾಥ್ಯೂ ಹಸಿರು ಕಚೇರಿಯ ಮಾನದಂಡಗಳನ್ನು ವಿವರಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.