ನವದೆಹಲಿ: ದೆಹಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು, 62 ವರ್ಷದ ವ್ಯಕ್ತಿಯ ಸಂಕೀರ್ಣ ಮೆದುಳಿನ ಗೆಡ್ಡೆಯನ್ನು ಮೂಗಿನ ನಾಳದ ಮೂಲಕ ಹೊರತೆಗೆಯುವ ಮೂಲಕ ಆ ವ್ಯಕ್ತಿಯ ಕಣ್ಣಿನ ದೃಷ್ಟಿಯನ್ನು ಪುನಃಸ್ಥಾಪಿಸಿದ್ದಾರೆ.
ರೋಗಿಯನ್ನು ನಂಗ್ಲೋಯ್‌ನಲ್ಲಿರುವ ಉಜಾಲಾ ಸಿಗ್ನಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಗೆಡ್ಡೆಯಿಂದ ವ್ಯಕ್ತಿಯ ಎರಡೂ ಕಣ್ಣುಗಳಿಗೆ ಹಾನಿಯಾಗಿ ದೃಷ್ಟಿ ಸಮಸ್ಯೆ ಉಂಟಾಗಿತ್ತು. ಮೂರು ಮೀಟರ್ ದೂರದಲ್ಲಿ ಬೆರಳೆಣಿಕೆಯೂ ಸಾಧ್ಯವಾಗುತ್ತಿರಲಿಲ್ಲ. ಮೂರು ಗಂಟೆಗಳ ಚಿಕಿತ್ಸೆ ಬಳಿಕ ಗೆಡ್ಡೆಯನ್ನು ಸಂಪೂರ್ಣವಾಗಿ ಹೊರ ತೆಗೆಯಲಾಗಿದೆ. 5 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ, ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.
'ಪಿಟ್ಯುಟರಿ ಅಡೆನಾಮಸ್'ಗೆಡ್ಡೆ ಕಣ್ಣಿನ ನರಗಳ ಮೇಲೆ ಒತ್ತಡ ಹಾಕಿತ್ತು. ಇದರಿಂದಾಗಿ ಗಂಭೀರ ದೃಷ್ಟಿ ಸಮಸ್ಯೆ ಉಂಟಾಗಿತ್ತು ಎಂದು ಗಾರ್ಗ್ ವಿವರಿಸಿದ್ದಾರೆ.
'ಮೂಗಿನ ನಾಳಗಳು ಮತ್ತು ಸ್ಪೆನಾಯ್ಡ್ ಸೈನಸ್ ಮೂಲಕ ನಾವು ಮೆದುಳಿನ ಟ್ಯೂಮರ್ ಹೊರ ತೆಗೆದಿದ್ದರಿಂದ ಮೆದುಳಿನ ಅಂಗಾಂಶಕ್ಕೆ ಕನಿಷ್ಠ ಹಾನಿಯೊಂದಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಶಸ್ತ್ರಚಿಕಿತ್ಸೆ ಬಳಿಕ ರೋಗಿಯ ದೃಷ್ಟಿಯಲ್ಲಿ ಬಹಳಷ್ಟು ಸುಧಾರಣೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ' ಎಂದೂ ಅವರು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ರೋಗಿಯು 6 ಮೀಟರ್ ದೂರದಿಂದಲೂ ಬೆರಳೆಣಿಕೆ ಮಾಡುತ್ತಿದ್ದಾರೆ.
'ಪಿಟ್ಯುಟರಿ ಅಡೆನಾಮಸ್'ಗಡ್ಡೆ ಅತ್ಯಂತ ಸಾಮಾನ್ಯ. ಆದರೆ, ಅದು ಉತ್ಪತ್ತಿಯಾಗಿರುವ ಜಾಗ ಮತ್ತು ಗಾತ್ರದ ಆಧಾರದ ಮೇಲೆ ಹಾರ್ಮೋನ್‌ಗಳ ಅಸಮತೋಲನ, ಕಣ್ಣಿನ ದೃಷ್ಟಿದೋಷ, ತಲೆನೋವು ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ ಎಂದು ವೈದ್ಯ ಡಾ. ಪುನೀತ್ ಕಾಂತ್ ಹೇಳಿದ್ದಾರೆ.