ತೆಹ್ರಾನ್ : ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಮುರಿದುಕೊಳ್ಳಬೇಕು ಎಂದು ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಜೀಜ್ ನಾಸಿರ್ಜಾದೇಶ್ ಹೇಳಿದ್ದಾರೆ.
ಇಸ್ರೇಲ್ ಗಾಜಾ ಮೇಲಿನ ದಾಳಿ ಮುಂದುವರಿಸಿದ್ದು, ಲೆಬೆನಾನ್ ಮೇಲೆ ಸಹ ದಾಳಿ ಮುಂದುವರಿಸಿದೆ. ಹೀಗಾಗಿ ಆ ದೇಶದ ರಾಜತಾಂತ್ರಿಕರನ್ನು ಮುಸ್ಲಿಂ ರಾಷ್ಟ್ರಗಳಿಂದ ಹೊರಹಾಕಬೇಕು ಎಂದು ಮನವಿ ಮಾಡಿದ್ದಾರೆ.(Iran - Israel)
ನೆತನ್ಯಾಹು ಸರ್ಕಾರದ ವಿರುದ್ಧ ನಿರ್ಬಂಧಗಳನ್ನು ವಿಧಿಸಬೇಕು. ಯೆಮೆನ್‌ನ ಹೌತಿ ಮುಖ್ಯಸ್ಥ ಅಬ್ದುಲ್ ಮಲಿಕ್ ಕೂಡ ಇಸ್ರೇಲ್‌ಗೆ ಶರಣಾಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷವನ್ನು ನಿಲ್ಲಿಸಲು ಅಮೆರಿಕ, ಫ್ರಾನ್ಸ್ ಮತ್ತು ಇತರ ದೇಶಗಳು ಮಾಡಿದ 21 ದಿನಗಳ ಕದನ ವಿರಾಮ ಪ್ರಸ್ತಾಪವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ತಿರಸ್ಕರಿಸಿದ್ದಾರೆ. ಪೂರ್ಣ ಬಲದೊಂದಿಗೆ ಲೆಬನಾನ್ ಮೇಲೆ ದಾಳಿ ಮಾಡಲು ಸೈನ್ಯಕ್ಕೆ ಆದೇಶಿಸಿದ್ದಾರೆ. ಇಸ್ರೇಲ್‌ನ ನೀತಿ ಸ್ಪಷ್ಟವಾಗಿದ್ದು, ಅವರ ಗುರಿ ಸಾಧಿಸುವವರೆಗೆ ದಾಳಿ ನಿಲ್ಲಿಸುವುದಿಲ್ಲ ಎಂದು ನೆತನ್ಯಾಹು ಹೇಳಿದ್ದಾರೆ.
ಹಿಜ್ಬುಲ್ಲಾಗಳ ಶಸ್ತ್ರಾಸ್ತ್ರಗಳನ್ನು ಮರೆಮಾಡಲಾಗಿರುವ ಬೇಕಾ ಕಣಿವೆಯನ್ನು ನಾಶಪಡಿಸಲಾಗುವುದು ಎಂದು ಈಗಾಗಲೇ ಘೋಷಿಸಲಾಗಿದೆ. ಇತ್ತೀಚಿನ ದಾಳಿಯಲ್ಲಿ ಹಿಜ್ಬುಲ್ಲಾದ ಡ್ರೋನ್ ಘಟಕದ ಕಮಾಂಡರ್ ಪ್ರಾಣ ಕಳೆದುಕೊಂಡಿದ್ದನ್ನು ಸ್ಮರಿಸಬಹುದು.