ಕೋಲ್ಕತ್ತ: ಪಶ್ಚಿಮ ಬಂಗಾಳದ ಕೆಲವಡೆ ಎದುರಾಗಿರುವ ಪ್ರವಾಹ ಪರಿಸ್ಥಿತಿಯು 'ಮಾನವ ನಿರ್ಮಿತ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
ಹೂಗ್ಲಿ ಜಿಲ್ಲೆಯ ಪೀಡಿತ ಪ್ರದೇಶಗಳಿಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿವಿಸಿ ಯೋಜನೆಯ ವಿವಿಧ ಅಣೆಕಟ್ಟುಗಳಿಂದ 3.5 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿರುವುದೇ ಪ್ರವಾಹ ಪರಿಸ್ಥಿತಿ ಕಾರಣವಾಗಿದೆ ಎಂದು ಮಮತಾ ತಿಳಿಸಿದ್ದಾರೆ.
ಈ ಹಿಂದೆ ಇಷ್ಟು ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿಲ್ಲ. ಈ ಸಂಬಂಧ ದಾಮೋದರ್ ವ್ಯಾಲಿ ಕಾರ್ಪೊರೇಷನ್ (ಡಿವಿಸಿ) ಅಧಿಕಾರಿಗಳು ಹಾಗೂ ಜಾರ್ಖಂಡ್ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಡಿವಿಸಿ ಅಣೆಕಟ್ಟುಗಳನ್ನು ಕೇಂದ್ರವು ಹೂಳೆತ್ತುತ್ತಿಲ್ಲ. ಈ ಅಣೆಕಟ್ಟುಗಳಲ್ಲಿ ಹೂಳೆತ್ತಿದ್ದರೆ ಇನ್ನೂ ಎರಡು ಲಕ್ಷ ಕ್ಯೂಸೆಕ್‌ಗಳಷ್ಟು ನೀರನ್ನು ಹೆಚ್ಚುವರಿಯಾಗಿ ಸಂಗ್ರಹಿಸಬಹುದಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಡಿವಿಸಿಯಿಂದ ನೀರನ್ನು ಬಿಡುಗಡೆಗೊಳಿಸುವ ಈ ಕ್ರಮವು ಪೂರ್ವಯೋಜನೆಯಾಗಿದ್ದು, ಪಶ್ಚಿಮ ಬಂಗಾಳವನ್ನು ತೊಂದರೆಗೆ ಸಿಲುಕಿಸಲು ದುರುದ್ದೇಶವಾಗಿದೆ ಎಂದು ಮಮತಾ ಆರೋಪಿಸಿದ್ದಾರೆ.
ದಾಮೋದರ್ ವ್ಯಾಲಿ ಕಾರ್ಪೊರೇಷನ್ (ಡಿವಿಸಿ) ಸ್ವತಂತ್ರ ಭಾರತದ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ.