ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್, 'ಹಿತಾಸಕ್ತಿ ಸಂಘರ್ಷ'ದ ಮತ್ತೊಂದು ಆರೋಪ ಮಾಡಿದೆ.
ಮಾಧವಿ ಅವರು ಸೆಬಿಯ ಪೂರ್ಣಾವಧಿ ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಕಂಪನಿಯೊಂದರಿಂದ ಬಾಡಿಗೆ ರೂಪದಲ್ಲಿ ಆದಾಯ ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವರ್ ಖೇರಾ ಅವರು ಶುಕ್ರವಾರ ಹೇಳಿದ್ದಾರೆ.
'2018 ರಿಂದ 2024ರವರೆಗೆ ಮಾಧವಿ ಅವರು 'ಕರೊಲ್ ಇನ್ಫೊ ಸರ್ವಿಸಸ್ ಲಿಮಿಟೆಡ್' ಎಂಬ ಕಂಪನಿಯಿಂದ ಬಾಡಿಗೆ ಆದಾಯದ ರೂಪದಲ್ಲಿ ₹2.16 ಕೋಟಿ ಪಡೆದುಕೊಂಡಿದ್ದಾರೆ. ಈ ಕಂಪನಿಯು ವೋಕ್‌ಹಾಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ವೋಕ್‌ಹಾಟ್ ಲಿಮಿಟೆಡ್ ವಿರುದ್ಧ ಇನ್‌ಸೈಡರ್ ಟ್ರೇಡಿಂಗ್ ಸೇರಿದಂತೆ ವಿವಿಧ ಪ್ರಕರಣಗಳ ಕುರಿತು ಸೆಬಿ ತನಿಖೆ ನಡೆಸುತ್ತಿದೆ' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆಬಿಯಿಂದ ತನಿಖೆ ಎದುರಿಸುತ್ತಿರುವ ಕಂಪನಿಯಿಂದ ಮಾಧವಿ ಅವರು ಬಾಡಿಗೆ ಪಡೆದಿರುವುದು 'ಹಿತಾಸಕ್ತಿ ಸಂಘರ್ಷ'ಕ್ಕೆ ಕಾರಣವಾಗಿರುವ ಭ್ರಷ್ಟಾಚಾರ ಪ್ರಕರಣ ಆಗಿದೆ. ಮಾತ್ರವಲ್ಲ, ಸೆಬಿ ನಿಯಮಗಳ ಉಲ್ಲಂಘನೆಯೂ ಹೌದು ಎಂದರು.
ಪ್ರಧಾನಿ ಮೌನ ಏಕೆ?: ಸೆಬಿ ಅಧ್ಯಕ್ಷೆ ವಿರುದ್ಧ ಹಲವು ಆರೋಪಗಳು ಕೇಳಿಬಂದ ಬಳಿಕವೂ ಪ್ರಧಾನಿ ಅವರು ಮೌನ ವಹಿಸಿರುವುದು ಏಕೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
'ಸೆಬಿಯ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಕುಸಿದಿರುವುದನ್ನು ತೋರಿಸಲು ಇನ್ನೆಷ್ಟು ಪುರಾವೆಗಳು ಬೇಕು ಎಂಬ ಪ್ರಶ್ನೆಯನ್ನು ಪ್ರಧಾನಿ ಅವರಿಗೆ ಕೇಳಬೇಕಾಗಿದೆ' ಎಂದಿದ್ದಾರೆ.