ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಚೀತಾ ಯೋಜನೆ'ಗೆ ಮಂಗಳವಾರಕ್ಕೆ ಎರಡು ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಚೀತಾ ಮರಿಗಳ ಜನನವಾಗಿದೆ, ಕೆಲವು ಮೃತಪಟ್ಟಿವೆ, ಯೋಜನೆ ಬಗ್ಗೆ ಟೀಕೆ-ಪ್ರಶಂಸೆಯೂ ವ್ಯಕ್ತವಾಗಿವೆ.
ಈ ಮಧ್ಯೆ ಆಫ್ರಿಕಾದಿಂದ ಮಧ್ಯಪ್ರದೇಶದ ಗಾಂಧಿಸಾಗರ ವನ್ಯಜೀವಿ ಅಭಯಾರಣ್ಯಕ್ಕೆ ಮತ್ತೊಂದು ಬ್ಯಾಚ್ ಚೀತಾಗಳನ್ನು ತಂದು ಬಿಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಎರಡು ವರ್ಷದಲ್ಲಿ ಚೀತಾಗಳು 13 ಮರಿಗಳಿಗೆ ಭಾರತದ ನೆಲದಲ್ಲಿ ಜನ್ಮ ನೀಡಿವೆ. ಮರಿಗಳ ಜನನವು ಅಧಿಕಾರಿಗಳ ಉತ್ಸಾಹವನ್ನು ಹೆಚ್ಚಿಸಿದೆ.
ನಮೀಬಿಯಾದಿಂದ ತಂದಿದ್ದ 'ಆಶಾ' ಹೆಸರಿನ ಚೀತಾವು ಜನವರಿಯಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. 'ಜ್ವಾಲಾ' ಕಳೆದ ವರ್ಷ ನಾಲ್ಕು ಮತ್ತು ಈ ವರ್ಷ ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ಪೈಕಿ ಮೂರು ಮೃತಪಟ್ಟಿವೆ. ದಕ್ಷಿಣ ಆಫ್ರಿಕಾದಿಂದ ತಂದಿದ್ದ 'ಗಾಮಿನಿ' ಎಂಬ ಚೀತಾ ಮಾರ್ಚ್‌ನಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ. ನಮೀಬಿಯಾದಿಂದ ತಂದಿದ್ದ 'ಶೌರ್ಯ' ಮತ್ತು 'ಪವನ್' ಹೆಸರಿನ ಗಂಡು ಚೀತಾಗಳು ಮೃತಪಟ್ಟಿವೆ.
2022ರ ಸೆಪ್ಟೆಂಬರ್‌ನಲ್ಲಿ ಮೊದಲ ತಂಡದಲ್ಲಿ ನಮೀಬಿಯಾದಿಂದ 8, ಎರಡನೇ ತಂಡದಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತರಲಾಗಿತ್ತು.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದ ಆವರಣದಲ್ಲಿ ನಿಗಾದಲ್ಲಿ ಇರಿಸಲಾಗಿರುವ ಚೀತಾಗಳನ್ನು ಮಾನ್ಸೂನ್ ಮುಗಿದ ನಂತರ ಅರಣ್ಯ ಪ್ರದೇಶಕ್ಕೆ ಬಿಡಲು ನಿರ್ಧರಿಸಲಾಗಿದೆ. ಕಳೆದ ವರ್ಷವೂ ಚೀತಾಗಳನ್ನು ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಮೂರು ಚೀತಾಗಳು ಮೃತಪಟ್ಟ ಕಾರಣ ಮತ್ತೆ ಅವುಗಳನ್ನು ವಾಪಸ್ ತರಲಾಗಿತ್ತು.
'ಈ ಎರಡು ವರ್ಷ ಭಾರತ ನೆಲದಲ್ಲಿ ಚೀತಾಗಳು ಕಾಲ ಕಳೆದಿದ್ದರೂ ಅವು ಅರಣ್ಯದಲ್ಲಿ ಬೆಳೆದಿಲ್ಲ. ಚೀತಾಗಳು ದೂರದ ಪ್ರದೇಶಕ್ಕೆ ಓಡಾಡಲು ಬಯಸುತ್ತವೆ. ಹೀಗಾಗಿ ಅವುಗಳು ಒತ್ತಡಕ್ಕೆ ಒಳಗಾಗಿರಬಹುದು' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಫ್ರಿಕಾ ತಜ್ಞರೊಬ್ಬರು ತಿಳಿಸಿದ್ದಾರೆ.