ಕಾಸರಗೋಡು: ಪ್ರಮುಖ ವಾಣಿಜ್ಯ ಬೆಳೆಯಾಗಿರುವ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ಉದ್ಯಮಶೀಲತೆಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂಬುದಾಗಿ ಕೃಷಿ ಸಚಿವ ಪಿ. ಪ್ರಸಾದ್ ತಿಳಿಸಿದರು. ಅವರು ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ಸೋಮವಾರ ಸಿಪಿಸಿಆರ್‍ಐ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ತೆಂಗು ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವೃತ್ತಾಕಾರದ ಆರ್ಥಿಕತೆ ಇಂದಿನ ಕಾಲಘಟ್ಟದಲ್ಲಿ ಹೆಚ್ಚು ಅಗತ್ಯವಾಗಿದೆ. ವಿಶ್ವ ತೆಂಗು ದಿನಾಚರಣೆ ಅಂಗವಾಗಿ "ವೃತ್ತಾಕಾರದ ಆರ್ಥಿಕತೆಗಾಗಿ ತೆಂಗು: ಗರಿಷ್ಠ ಮೌಲ್ಯಕ್ಕಾಗಿ ಪಾಲುದಾರಿಕೆಯನ್ನು ನಿರ್ಮಿಸುವುದು" ಎಂಬ ಈ ವರ್ಷದ ಘೋಷಣೆ ಅಂತಾರಾಷ್ಟ್ರೀಯ ಸಮುದಾಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯ ಮಾನವ ನಿರ್ಮಿತವಾಗಿದ್ದು, ಇದರ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಮನುಷ್ಯ ಮತ್ತು ಪ್ರಕೃತಿಯ ಜೋಡಣೆಯೊಂದಿಗಿನ ಕೃಷಿ ಆವಿಷ್ಕಾರದಿಂದ ಮಾತ್ರ ಈ ಸಮಸ್ಯೆಗಳಿಂದ ಪಾರಾಗಲು ಸಾಧ್ಯ. ಕೇರಳದ ಜನತೆಯ ಉಸಿರಾಗಿರುವ ತೆಂಗು ಬೆಳೆಯಲ್ಲಿ ಮತ್ತಷ್ಟು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಯೊಂದಿಗೆ ಹೆಚ್ಚಿನ ಆವಿಷ್ಕಾರ ಕಂಡುಕೊಳ್ಳಬೇಕಾಗಿದೆ. ತೆಂಗು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ಮತ್ತಷ್ಟು ಪ್ರಯೋಗ ನಡೆದುಬರಬೇಕಾಗಿದೆ ಎಂದು ತಿಳಿಸಿದರು. ತೋಟಗಾರಿಕಾ ವಿಜ್ಞಾನ ವಿಭಾಗದ ಮಹಾನಿರ್ದೇಶಕ ಉಪನಿರ್ದೇಶಕ ಡಾ.ಎಸ್.ಕೆ.ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮೌಲ್ಯವರ್ಧಿತ ಉತ್ಪನ್ನಗಳಿಂದ ತೆಂಗು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿಗೆ ಕಾರಣವಾಗಿದೆ. ತೆಂಗು ಜೀವನ ಕಟ್ಟಿಕೊಡುವ ವೃಕ್ಷವಾಗಿದೆ. ನೀರಾ ಸೇರಿದಂತೆ ಸಿಪಿಸಿಆರ್‍ಐ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ದೇಶಾದ್ಯಂತ ಮನ್ನಣೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ತೆಂಗು ಬೆಳೆಯಂತೆ ಅಡಕೆ ಕೃಷಿಕರೂ ಕೆಲವೊಂದು ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.ಅಮೃತ್‍ಪುರಿ ಎಚ್‍ಯುಟಿ ಲ್ಯಾಬ್ ನಿರ್ದೇಶಕ ಡಾ. ರಾಜೇಶ್‍ಕಣ್ಣನ್, ಡಾ. ಬಿ. ಆಗಸ್ಟಿನ್ ಜೆರಾಲ್ಡ್ ಅತಿಥಿಯಾಗಿ ಭಾಗವಹಿಸಿದ್ದರು.
ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಿಪಿಸಿಆರ್‍ಐನ ನವೀನ ತಂತ್ರಜ್ಞಾನ ಮತ್ತು ಕ್ಷೇತ್ರಗಳಲ್ಲಿ ಅದರ ಅಳವಡಿಕೆಯಂತಹ ಸಾಧನೆ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ವಯನಾಡು ಸಂತ್ರಸ್ತರಿಗಾಗಿ ಸಿಪಿಸಿಆರ್‍ಐ ವತಿಯಿಂದ 3,66,000ರೂ. ಮೊತ್ತದ ಚೆಕ್ಕನ್ನು ಸಚಿವ ಪಿ. ಪ್ರಕಾಶ್ ಅವರಿಗೆ ಬೆ.ಬಿ. ಹೆಬ್ಬರ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಯಶಸ್ವಿ ಕೃಷಿಕರು, ಕೃಷಿ ಉದ್ಯಮಿಗಳು, ತೆಂಗು ಉತ್ಪಾದಕ ಕಂಪೆನಿದಾರರನ್ನು ಸನ್ಮಾನಿಸಲಾಯಿತು.
ಕೋಕೊನಟ್ ಫ್ಲೇವರ್‍ಡ್ ಮಿಲ್ಕ್'ಕಲ್ಪ ಬ್ಲಿಝ್', ತೆಂಗಿನ ಪಾನೀಯ'ಝಿಲಾ' ಹಾಗೂ ಕೃಷಿ ಸಂಬಂಧಿ ಬುಲ್ಲೆಟಿನ್ ಬಿಡುಗಡೆಗೊಳಿಸಲಾಯಿತು. ನಬಾರ್ಡ್‍ನ ಶರೋನ್ ನವಾಜ್ ಸಿಪಿಸಿಆರ್‍ಐ ಕೃಷಿ ಇಲಾಖೆಯ ಜ್ಯೋತಿಕುಮಾರಿ ಉಪಸ್ಥಿತರಿದ್ದರು. ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿದರು. ಸಮಾಜ ವಿಜ್ಞಾನ ವಿಭಾಗದ ಎಚ್‍ಒಡಿ ಡಾ.ಕೆ.ಪೆÇನ್ನುಸಾಮಿ ವಂದಿಸಿದರು.
ರೈತರು, ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು, ಉದ್ಯಮಿಗಳು, ಉತ್ಪಾದಕ ಸಂಸ್ಥೆಗಳ ಪ್ರಾಯೋಜಕರು ಪಾಲ್ಗೊಂಡಿದ್ದರು. ಈ ಸಂದರ್ಭ ಕೃಷಿಕರೊಂದಿಗೆ ಸಂವಾದ ನಡೆಯಿತು.