ನವದೆಹಲಿ: 'ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಸುಧಾರಣೆಗೆ ಸಂಬಂಧಿಸಿದಂತೆ ಸರ್ಕಾರ ರಚಿಸಿದ್ದ ಸಮಿತಿಯ ವರದಿಯನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು' ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವೇಳೆ ಸಂಯುಕ್ತ ಕಿಸಾನ್ ಮೋರ್ಚಾವು, ಎಂಎಸ್‌ಪಿ ಅಗತ್ಯತೆಯನ್ನು ಪ್ರತಿಪಾದಿಸಿತ್ತು.
ಮತ್ತಷ್ಟು ಪರಿಣಾಮಕಾರಿಯಾಗಿ ಎಂಎಸ್‌ಪಿ ಜಾರಿ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವುದು, ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದಕ್ಕೆ ಸಂಬಂಧಿಸಿದಂತೆ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಕೇಂದ್ರ ಸರ್ಕಾರದ 100 ದಿನಗಳ ಕಾರ್ಯಕ್ರಮದ ಅಂಗವಾಗಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಸಿಂಗ್ ಅವರು, 'ಸಮಿತಿಯ ಸದಸ್ಯರೊಂದಿಗೆ ನಿರಂತರ ಸಂಪರ್ಕ ಹೊಂದಲಾಗಿದೆ' ಎಂದರು.
'ಅಕ್ಟೋಬರ್‌ನಿಂದ ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೊದಲ್ಲಿ 'ಅಧುನಿಕ್ ಕೃಷಿ ಚೌಪಾಲ್' ಕಾರ್ಯಕ್ರಮ ಪ್ರಸಾರವಾಗಲಿದೆ. ಕೃಷಿಯಲ್ಲಿನ ಹೊಸ ಆವಿಷ್ಕಾರಗಳ ಬಗ್ಗೆ ವಿಜ್ಞಾನಿಗಳು ರೈತರೊಂದಿಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ' ಎಂದು ವಿವರಿಸಿದರು.
'ಕುಲಾಂತರಿ ತಳಿ ಹತ್ತಿ ವಿಚಾರವು ಸೂಕ್ಷ್ಮ ವಿಷಯವಾಗಿದೆ. ಸಮಗ್ರವಾಗಿ ಚರ್ಚಿಸಿದ ಬಳಿಕ ಕುಲಾಂತರಿ ತಂತ್ರಜ್ಞಾನಕ್ಕೆ ಅನುಮೋದನೆ ನೀಡಲಾಗುವುದು' ಎಂದರು.