ನವದೆಹಲಿ: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರವು ಅವರ ಮನೆಗಳನ್ನು ನೆಲಸಮಗೊಳಿಸುವ ಕ್ರಮದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, 'ವ್ಯಕ್ತಿ ಅಪರಾಧಿ ಎಂಬ ಕಾರಣಕ್ಕೆ ಒಬ್ಬರ ಮನೆಯನ್ನು ಹೇಗೆ ಕೆಡವಲಾಗುತ್ತದೆ' ಎಂದು ಪ್ರಶ್ನಿಸಿದೆ.
ಈ ಸಂಬಂಧ ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
'ಯಾವುದೇ ಅಪರಾಧ ಕೃತ್ಯದಲ್ಲಿ ವ್ಯಕ್ತಿಯೊಬ್ಬ ಭಾಗಿಯಾಗಿದ್ದಾನೆ ಎಂದಾದರೆ ಆತನ ಮನೆಯನ್ನು ಹೇಗೆ ನೆಲಸಮಗೊಳಿಸಲಾಗುತ್ತದೆ. ಒಂದೊಮ್ಮೆ ಆತ ಅಪರಾಧಿಯೇ ಆದರೂ, ಕಾನೂನು ಹಾಗೂ ನಿರ್ದಿಷ್ಟ ನಿಯಮಗಳನ್ನು ಪಾಲಿಸದೇ ಮನೆ ನೆಲಸಮಗೊಳಿಸಲು ಬಾರದು. ಹಾಗೆಂದ ಮಾತ್ರಕ್ಕೆ ಸಾರ್ವಜನಿಕ ರಸ್ತೆಗಳಲ್ಲಿ ನಿರ್ಮಿಸಿದ ಅನಧಿಕೃತ ಕಟ್ಟಡಗಳನ್ನು ನಿರ್ಮಿಸುವವರನ್ನ ಹಾಗೂ ಅತಿಕ್ರಮಣಕಾರರನ್ನು ಸುಪ್ರೀಂ ಕೋರ್ಟ್ ರಕ್ಷಿಸುವುದಿಲ್ಲ' ಎಂದು ನ್ಯಾ. ಬಿ.ಆರ್. ಗವಿ ಹಾಗೂ ನ್ಯಾ. ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಹೇಳಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದರು. ರಾಜ್ಯ ಸರ್ಕಾರವು ಈ ಹಿಂದೆ ಇದೇ ವಿಷಯವಾಗಿ ಸಲ್ಲಿಸಿದ್ದ ಪ್ರಮಾಣಪತ್ರವನ್ನು ಉಲ್ಲೇಖಿಸಿ ಮಾತನಾಡಿ, 'ಒಬ್ಬ ವ್ಯಕ್ತಿ ಯಾವುದೇ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದಾದರೆ, ಆತನ ಸ್ಥಿರಾಸ್ತಿಯನ್ನು ಕೆಡವಲು ಆಗದು' ಎಂಬುದನ್ನು ಪುನರುಚ್ಚರಿಸಿದರು.
'ಸ್ಥಳೀಯ ಆಡಳಿತದ ಯಾವುದೇ ಮಾರ್ಗಸೂಚಿಯನ್ನು ಉಲ್ಲಂಘಿಸಿ ನಿರ್ಮಿಸಲಾದ ಕಟ್ಟಡಗಳನ್ನು ನಿಯಮದಂತೆಯೇ ಕೆಡವಲಾಗಿದೆ. ಯಾವುದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾದ ವ್ಯಕ್ತಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ' ಎಂದು ಪೀಠಕ್ಕೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ನಿಮ್ಮ ಹೇಳಿಕೆ ಇದೇ ಆದರೆ, ಅದನ್ನು ನಾವು ದಾಖಲಿಸುತ್ತೇವೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿಯನ್ನು ರಚಿಸಿ, ಬಿಡುಗಡೆಗೊಳಿಸಲಾಗುವುದು' ಎಂದಿತು.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ಈ ವಿಷಯವಾಗಿ ಉತ್ತರ ಪ್ರದೇಶ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು. ಜತೆಗೆ, ಅರ್ಜಿದಾರರು ತಾವು ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಮನೆಗಳನ್ನು ಕೆಡವಲಾಗಿದೆ ಎಂದು ಬಿಂಬಿಸುವಂತೆ ಹೇಳಿಕೆ ನೀಡಿದ್ದಾರೆ ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ ದವೆ, 'ಜನರಿಗೆ 'ಬುಲ್ಡೋಜರ್ ನ್ಯಾಯ' ನೀಡುವುದಿಲ್ಲ ಎಂಬ ಸಂಗತಿ ಇಡೀ ದೇಶಕ್ಕೇ ತಲುಪಲಿ. ಏಕೆಂದರೆ ದೇಶದ ಬಹಳಷ್ಟು ರಾಜ್ಯಗಳು ಈಗ ಇಂಥ ಬುಲ್ಡೋಜರ್ ಕಾನೂನನ್ನು ಆಚರಣೆಗೆ ತಂದಿವೆ' ಎಂದರು.
'ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು. ಪ್ರಕರಣದ ವಾದ ಮಂಡಿಸುತ್ತಿರುವ ವಕೀಲರೂ ಇದಕ್ಕೆ ತಮ್ಮ ಸಲಹೆಗಳನ್ನು ನೀಡಲಿ. ಅವೆಲ್ಲವನ್ನೂ ಒಳಗೊಂಡಂತೆ ಮಾರ್ಗಸೂಚಿ ಪ್ರಕಟಿಸಲಾಗುವುದು' ಎಂದ ಪೀಠ, ಮುಂದಿನ ವಿಚಾರಣೆಯನ್ನು ಸೆ. 17ಕ್ಕೆ ಮುಂದೂಡಿತು.