ಅಂಬಾಲ : 'ಹರಿಯಾಣದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಕೂಡ ಆಕಾಂಕ್ಷಿಯಾಗಿದ್ದೇನೆ' ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.
ಅಂಬಾಲ : 'ಹರಿಯಾಣದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಕೂಡ ಆಕಾಂಕ್ಷಿಯಾಗಿದ್ದೇನೆ' ಎಂದು ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ನಯಾಬ್ ಸಿಂಗ್ ಸೈನಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷವು ಈಗಾಗಲೇ ಸ್ಪಷ್ಟಪಡಿಸಿದೆ.
'ನನಗೆ ತಿಳಿದಂತೆ, ಪಕ್ಷದಲ್ಲಿ ಇದುವರೆಗೂ ಏನಾಗಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಹರಿಯಾಣದ ವಿವಿಧೆಡೆಯಿಂದ ಜನರು ಬಂದು ನನ್ನನ್ನು ಭೇಟಿಯಾಗುತ್ತಿದ್ದಾರೆ. ಪಕ್ಷದಲ್ಲಿ ನೀವು ಹಿರಿಯರಾಗಿದ್ದು, ಯಾಕೆ ಮುಖ್ಯಮಂತ್ರಿಯಾಗಬಾರದು ಎಂದು ಸ್ವಕ್ಷೇತ್ರ ಅಂಬಾಲದಲ್ಲಿಯೂ ಕೇಳುತ್ತಿದ್ದಾರೆ. ಜನರ ಬೇಡಿಕೆ ಹಾಗೂ ಹಿರಿತನ ಆಧರಿಸಿ, ನಾನು ಕೂಡ ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಮಂಡಿಸುತ್ತೇನೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ' ಎಂದು ತಿಳಿಸಿದರು.
'ನನ್ನನ್ನು ಸಿ.ಎಂ ಆಗಿ ಆಯ್ಕೆ ಮಾಡುತ್ತದೆಯೋ, ಇಲ್ಲವೋ ಎಂಬುದು ಬೇರೆ ವಿಚಾರ. ಒಂದೊಮ್ಮೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರೆ, ಹರಿಯಾಣದ ಚಹರೆಯನ್ನೇ ಬದಲಾಯಿಸುತ್ತೇನೆ' ಎಂದು ಭರವಸೆ ನೀಡಿದರು.
71 ವರ್ಷದ ಅನಿಲ್ ವಿಜ್ ಅವರು, ಅಂಬಾಲ ಕಂಟೋನ್ಮೆಂಟ್ ಕ್ಷೇತ್ರದಿಂದ ಒಟ್ಟು ಆರು ಬಾರಿ ಶಾಸಕರಾಗಿದ್ದು, ಇದೇ ಕ್ಷೇತ್ರದಿಂದ ಪುನಾರಾಯ್ಕೆ ಬಯಸಿದ್ದಾರೆ.