ಗುವಾಹಟಿ: ಅಸ್ಸಾಂನ ನಲ್ಬರಿಯಲ್ಲಿ ಗ್ರೂಪ್ 'ಸಿ' ಹುದ್ದೆಗಳ ಪರೀಕ್ಷೆಗೆ ಹಾಜರಾಗಿದ್ದ ವೇಳೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ನನ್ನ ಖಾಸಗಿ ಅಂಗಗಳನ್ನು ತಪಾಸಣೆ ನಡೆಸಿದರು ಎಂದು ಮಹಿಳಾ ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ.
ಗುವಾಹಟಿ: ಅಸ್ಸಾಂನ ನಲ್ಬರಿಯಲ್ಲಿ ಗ್ರೂಪ್ 'ಸಿ' ಹುದ್ದೆಗಳ ಪರೀಕ್ಷೆಗೆ ಹಾಜರಾಗಿದ್ದ ವೇಳೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರು ನನ್ನ ಖಾಸಗಿ ಅಂಗಗಳನ್ನು ತಪಾಸಣೆ ನಡೆಸಿದರು ಎಂದು ಮಹಿಳಾ ಅಭ್ಯರ್ಥಿಯೊಬ್ಬರು ಆರೋಪಿಸಿದ್ದಾರೆ.
ಮಹಿಳಾ ಅಭ್ಯರ್ಥಿಯ ಆರೋಪ ಕುರಿತು ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಇಂದು (ಸೋಮವಾರ) ಡಿಜಿಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
'ನಲ್ಬರಿ ಘಟನೆಯ ಕುರಿತು ಡಿಜಿಪಿ ಅವರೊಂದಿಗೆ ಮಾತನಾಡಿದ್ದೇನೆ. ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ಮಹಿಳಾ ಕಾನ್‌ಸ್ಟೆಬಲ್ ನನ್ನ ಖಾಸಗಿ ಅಂಗಗಳನ್ನು ತಪಾಸಣೆ ನಡೆಸಿದರು ಎಂದು ಮಹಿಳಾ ಅಭ್ಯರ್ಥಿಯೊಬ್ಬರು ಆರೋಪಿಸಿರುವ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದೇನೆ' ಎಂದು ಶರ್ಮಾ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರ ಲಖಿಂಪುರದಲ್ಲಿ ನಡೆದ ಮತ್ತೊಂದು ಘಟನೆಯ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ತಮಗೆ ಮಾಹಿತಿ ನೀಡಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ ಮಹಿಳಾ ಅಭ್ಯರ್ಥಿಯ ಬಳಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನನಗೆ ನಮ್ಮ ತಾಯಂದಿರು ಮತ್ತು ಸಹೋದರಿಯರ ಘನತೆ ಮತ್ತು ಗೌರವವು ಅತ್ಯಂತ ಮಹತ್ವದ್ದಾಗಿದೆ. ಹಾಗೆಯೇ ಅಸ್ಸಾಂ ನೇರ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
'ಪರೀಕ್ಷೆಯ ಪಾರದರ್ಶಕತೆ ವಿಚಾರಕ್ಕೆ ಸಂಬಂಧಿಸಿ ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಜತೆಗೆ, ಮಹಿಳಾ ಅಭ್ಯರ್ಥಿಗಳ ಸಭ್ಯತೆ ಮತ್ತು ಘನತೆಯನ್ನು ಎಲ್ಲಾ ಸಮಯದಲ್ಲೂ ಕಾಪಾಡಲಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಖಾಲಿ ಇರುವ ಗ್ರೂಪ್ 'ಸಿ' ಹುದ್ದೆಗಳನ್ನು ಭರ್ತಿ ಮಾಡಲು ಅಸ್ಸಾಂ ಸರ್ಕಾರವು ಭಾನುವಾರ ನೇರ ನೇಮಕಾತಿ ಪರೀಕ್ಷೆಯನ್ನು ನಡೆಸಿತ್ತು. ರಾಜ್ಯದಾದ್ಯಂತ ಮೂರೂವರೆ ಗಂಟೆಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದರ ಜತೆಗೆ ಬಿಗಿ ಭದ್ರತೆಯಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.
ರಾಜ್ಯದಾದ್ಯಂತ 2,305 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು 11,23,204 ಅಭ್ಯರ್ಥಿಗಳು ಹಾಜರಾಗಿದ್ದರು.