ಕಳೆದ ಒಂದೆರೆಡು ವಾರಗಳಿಂದ ಮಾಲಿವುಡ್ನಲ್ಲಿ ದೊಡ್ಡ ವಿವಾದವೊಂದು ಭುಗಿಲೆದಿದ್ದು, 'ಕಾಸ್ಟಿಂಗ್ ಕೌಚ್' ಪದ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಪ್ರತ್ಯೇಕವಾಗಿ ಕೆ. ಹೇಮಾ ಕಮಿಟಿಯ ವರದಿ ಹೊರಬಿದ್ದ ಬಳಿಕ ಮಲಯಾಳಂ ಚಿತ್ರರಂಗದ ಸ್ಟಾರ್ ನಟಿಮಣಿಯರು ಸೇರಿದಂತೆ ಇನ್ನಿತರರು ಸಹ ತಮಗಾದ ಲೈಂಗಿಕ ಕಿರುಕುಳ ಅನುಭವ ಕುರಿತು ಮುಕ್ತವಾಗಿ ಕ್ಯಾಮರಾ ಮುಂದೆ ಹಂಚಿಕೊಳ್ಳುತ್ತಿದ್ದಾರೆ.
ಸದ್ಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಮಾಲಿವುಡ್ನ ಘನತೆ, ಗೌರವಕ್ಕೆ ಕಪ್ಪುಚುಕ್ಕೆ ತಂದ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟ ಮೋಹನ್ ಲಾಲ್ ರಾಜೀನಾಮೆ ಘೋಷಿಸಿದರು. ನಟನ ಬೆನ್ನಲ್ಲೇ ಸಮಿತಿಯ ಸದಸ್ಯರೆಲ್ಲರೂ ಒಟ್ಟಾಗಿ ರಾಜೀನಾಮೆ ಸಲ್ಲಿಸಿದ್ದು, ಕಮಿಟಿಯನ್ನು ವಿಸರ್ಜಿಸಿದರು. ಇದೀಗ ಮತ್ತೊಂದು ಶಾಕಿಂಗ್ ಸಂಗತಿಯೊಂದು ಬಟಾಬಯಲಾಗಿದೆ. ಹಿರಿಯ ನಟಿ ರಾಧಿಕಾ ಶರತ್ಕುಮಾರ್ ಕೂಡ ಇಂತಹದ್ದೇ ಒಂದು ಘಟನೆ ಅನುಭವಿಸಿದ್ದು, ಇಂಡಸ್ಟ್ರಿಯ ಕರಾಳ ಮುಖವನ್ನು ಕಳಚಿಟ್ಟಿದ್ದಾರೆ.
ಹೇಮಾ ಕಮಿಟಿ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ರಾಧಿಕಾ, 'ಕಾಸ್ಟಿಂಗ್ ಕೌಚ್ ಸಮಸ್ಯೆ ಕೇವಲ ಮಾಲಿವುಡ್ ಮಾತ್ರವಲ್ಲ, ಇತರೆ ಚಿತ್ರರಂಗದ ಸಮಸ್ಯೆಯೂ ಕೂಡ. ನಟಿಯರು ಬಳಸುವ ಕ್ಯಾರವನ್ಗಳಲ್ಲಿ ಸೀಕ್ರೆಟ್ ಕ್ಯಾಮರಾ ಇಟ್ಟು ಅವರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುತ್ತಾರೆ ಎಂಬ ಅಚ್ಚರಿ ಸಂಗತಿಯನ್ನು ತಾವು ಅನುಭವಿಸಿದ ಘಟನೆಯ ಮೂಲಕ ರಿವೀಲ್ ಮಾಡಿದ್ದಾರೆ. ನಮ್ಮ ದುರಾದೃಷ್ಟ ಚಿತ್ರರಂಗದಲ್ಲಿ ಮಹಿಳೆಯರಿಗೆ ಇಂತಹ ಕೆಟ್ಟ ಪರಿಸ್ಥಿತಿ ಬಂದಿರುವುದು. ಕಳೆದ 46 ವರ್ಷಗಳಿಂದ ನಾನು ಚಿತ್ರರಂಗದಲ್ಲಿದ್ದೇನೆ. ಇದೇ ರೀತಿಯ ಸಮಸ್ಯೆಯನ್ನು ನಾನು ಸಹ ಅನುಭವಿಸಿದ್ದೇನೆ. ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.
'ಸಿನಿಮಾವೊಂದರ ಚಿತ್ರೀಕರಣದ ಭಾಗವಾಗಿ ನಾನು ಕೇರಳಕ್ಕೆ ಹೋಗಿದ್ದೆ. ಆಗ ನಡೆದ ಘಟನೆಯನ್ನು ನಾನು ಎಂದಿಗೂ ಮರೆಯಲಾರೆ. ಶಾಟ್ ಮುಗಿಸಿ ಹೊರಡುವಾಗ ಒಂದಷ್ಟು ಪುರುಷರು ಸೆಟ್ನಲ್ಲಿ ಒಟ್ಟಿಗೆ ಕುಳಿತು ಫೋನ್ನಲ್ಲಿ ಏನನ್ನೋ ನೋಡುತ ನಗುತ್ತಿದ್ದರು. ನೀವು ಯಾವುದೋ ವೀಡಿಯೊವನ್ನು ವೀಕ್ಷಿಸುತ್ತಿರುವಿರಿ ಎಂದು ನನಗೆ ಅರ್ಥವಾಯಿತು. ತಕ್ಷಣವೇ ಚಿತ್ರತಂಡದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಅವರು ಏನು ನೋಡುತ್ತಿದ್ದರು ವಿಚಾರಿಸಿ ಎಂದು ನಾನು ಹೇಳಿದೆ' ಎಂದರು.
'ಕ್ಯಾರವಾನ್‌ಗಳಲ್ಲಿ ಸೀಕ್ರೆಟ್ ಕ್ಯಾಮರಾಗಳನ್ನು ಅಳವಡಿಸಿ, ಮಹಿಳೆಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ವೀಕ್ಷಿಸುವುದು ಗೊತ್ತಾಯಿತು. ಆ ಘಟನೆಯ ನಂತರ ನಾನು ಕ್ಯಾರವನ್ ಬಳಸಲು ಹೆದರುತ್ತಿದ್ದೆ. ಶೂಟಿಂಗ್ಗೆ ಹೋದಾಗ ಬಟ್ಟೆ ಬದಲಾಯಿಸಲು, ವಿಶ್ರಾಂತಿ ಪಡೆಯಲು, ಊಟ ಮಾಡಲು ಇದು ನಮ್ಮ ಖಾಸಗಿ ಜಾಗ' ಎಂದು ರಾಧಿಕಾ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಈ ಹೇಳಿಕೆ ಇದೀಗ ವೈರಲ್ ಆಗಿದೆ.