ಮುಂಬೈ: ಪುಣೆ ವಿಮಾನ ನಿಲ್ದಾಣವನ್ನು 'ಜಗದ್ಗುರು ಸಂತ ತುಕಾರಾಂ ಮಹಾರಾಜ್' ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸರ್ಕಾರ ಅನುಮೋದನೆ ನೀಡಿದೆ.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೊಹೋಲ್, ಪುಣೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಜಗದ್ಗುರು ಸಂತ ತುಕಾರಾಮ್ ಮಹಾರಾಜ್ ವಿಮಾನ ನಿಲ್ದಾಣ' ಎಂದು ಹೆಸರಿಡುವ ಮಾಡುವ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದ್ದು, ನಾವು ನೀಡಿದ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಂದಿನ ಪ್ರಕ್ರಿಯೆಗಾಗಿ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮೊಹೋಲ್ ಹೇಳಿದ್ದಾರೆ.
ಪುಣೆಯಲ್ಲಿ ಜನಿಸಿದ ಸಂತ ತುಕಾರಾಂ ಪ್ರಮುಖ ಸಂತ ಮತ್ತು ಆಧ್ಯಾತ್ಮಿಕ ಕವಿಯೂ ಆಗಿದ್ದರು.