ನವದೆಹಲಿ: ನಕಲಿ ಮಾಹಿತಿ ನೀಡಿದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿರುವ ಅರ್ಜಿಯಲ್ಲಿ ಸುಳ್ಳು ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂಬ ಕೇಂದ್ರ ಲೋಕಸೇವಾ ಆಯೋಗದ ಆರೋಪದ ಕುರಿತು ತಮ್ಮ ನಿಲುವು ದಾಖಲಿಸುವಂತೆ ಮಾಜಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ಬಂಧನ ಪೂರ್ವ ಜಾಮೀನು ಕೋರಿ ಖೇಡ್ಕರ್ ಅವರು ಸಲ್ಲಿಸಿರುವ ಅರ್ಜಿಯನ್ನು ಆಕ್ಷೇಪಿಸಿ ಆಯೋಗವು ತನ್ನ ತಕರಾರನ್ನು ಸಲ್ಲಿಸಿತ್ತು. ಆಯೋಗದ ಅರ್ಜಿಗೆ ತಮ್ಮ ಪ್ರತಿಕ್ರಿಯೆ ದಾಖಲಿಸುವಂತೆ ಖೇಡ್ಕರ್ ಅವರಿಗೆ ನ್ಯಾ. ಸುಬ್ರಮಣಿಯಂ ಪ್ರಸಾದ್ ಅವರು ನಿರ್ದೇಶಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ. 26ಕ್ಕೆ ಮುಂದೂಡಿದರು.
ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಪರೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಂಗವಿಕಲರ ಕೋಟಾದಡಿ ಲಾಭ ಪಡೆಯಲು ನಕಲಿ ಪ್ರಮಾಣಪತ್ರ ನೀಡಿ ವಂಚಿಸಿದ ಆರೋಪ ಖೇಡ್ಕರ್ ವಿರುದ್ಧ ಕೇಳಿಬಂದಿದೆ. ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ಪೂಜಾ ನಿರಾಕರಿಸಿದ್ದಾರೆ.
ಆಯೋಗದ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ತನಿಖೆ ಹಾಗೂ ಸೂಕ್ತ ವಿಚಾರಣೆ ಬಾಕಿ ಇರುವ ಮತ್ತೊಂದು ಪ್ರಕರಣದಲ್ಲೂ ಖೇಡ್ಕರ್ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾದಲ್ಲಿ ಇದು ಅಪರಾಧ ಕೃತ್ಯವಾಗಿದೆ. ಖೇಡ್ಕರ್ ಅವರು ಮಾಡಿರುವುದು ಅಪಾಯಕಾರಿ ತಪ್ಪು ಎಂದು ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ನರೇಶ್ ಕೌಶಿಕ್ ಹೇಳಿದ್ದಾರೆ.
'ನ್ಯಾಯಾಲಯದಿಂದ ತನ್ನ ಪರ ಆದೇಶ ಪಡೆಯುವ ಉದ್ದೇಶದಿಂದ ಆಯೋಗವು ತನ್ನ ಬೆರಳಚ್ಚನ್ನು ಪಡೆದಿದೆ ಎಂದು ಖೇಡ್ಕರ್ ಅವರು ಸುಳ್ಳು ಹೇಳಿದ್ದಾರೆ. ಆಯೋಗವು ಯಾವುದೇ ಅಭ್ಯರ್ಥಿಯ ವೈಯಕ್ತಿಕ ಮಾಹಿತಿಯಲ್ಲಿ ಬೆರಳಚ್ಚು ಹಾಗೂ ಕಣ್ಣಿನ ಗುರುತು ದಾಖಲೆಗಳನ್ನು ಸಂಗ್ರಹಿಸುವುದಿಲ್ಲ. ಹೀಗಾಗಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರದ್ದು ಸುಳ್ಳು ಹೇಳಿಕೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ' ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಬಂಧನ ಆದೇಶಕ್ಕೆ ಮಧ್ಯಂತರ ತಡೆ ನೀಡುವ ಮೂಲಕ ಖೇಡ್ಕರ್‌ಗೆ ನ್ಯಾಯಾಲಯ ರಕ್ಷಣೆ ನೀಡಿತ್ತು. ಇದನ್ನು ರದ್ದುಪಡಿಸುವಂತೆ ಕೇಂದ್ರ ಲೋಕಸೇವಾ ಆಯೋಗ ಹಾಗೂ ದೆಹಲಿ ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ.
'ನಾಗರಿಕ ಸೇವಾ ಪರೀಕ್ಷೆ ಕುರಿತು ಸಾರ್ವಜನಿಕರಲ್ಲಿ ನಂಬಿಕೆ ಹಾಗೂ ಸಮಗ್ರತೆ ಉಳಿಸಿಕೊಳ್ಳಬೇಕೆಂದರೆ ಈ ಪ್ರಕರಣದ ಹಿಂದಿನ ಸಂಚನ್ನು ಭೇದಿಸುವ ಅಗತ್ಯವಿದೆ. ಆದರೆ ಆರೋಪಿಗೆ ಯಾವುದೇ ರೀತಿಯ ರಕ್ಷಣೆ ನೀಡುವುದು ತನಿಖೆಗೆ ಅಡ್ಡಿಯಾಗಲಿದೆ' ಎಂದು ದೆಹಲಿ ಪೊಲೀಸರು ನ್ಯಾಯಾಲಯವನ್ನು ಕೋರಿದ್ದಾರೆ.
'ಖೇಡ್ಕರ್ ಅವರು ಆಯೋಗ ಮತ್ತು ಸಾರ್ವಜನಿಕರನ್ನು ವಂಚಿಸಿದ್ದಾರೆ. ಹೀಗಾಗಿ ಈ ವಂಚನೆಯ ಜಾಲವನ್ನು ಭೇದಿಸಲು ಮತ್ತು ಇದರ ಆಳವನ್ನು ಅರಿಯಲು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ' ಎಂದು ಆಯೋಗ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು.
ನಕಲಿ ದಾಖಲೆಗಳನ್ನು ಸಲ್ಲಿಸಿ ಕೇಂದ್ರ ಲೋಕಸೇವಾ ಆಯೋಗದ ನೌಕರಿ ಗಿಟ್ಟಿಸಿಕೊಂಡ ಆರೋಪದಡಿ ಪೂಜಾ ಖೇಡ್ಕರ್ ಅವರ ವಿರುದ್ಧ ಜುಲೈನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದ ಯುಪಿಎಸ್‌ಸಿ, ಸರಣಿ ಕ್ರಮ ಕೈಗೊಂಡಿತ್ತು. ದೆಹಲಿ ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದರು.