ಹೈದರಾಬಾದ್: ತೆಲುಗು ಸಿನಿಮಾ ಕ್ಷೇತ್ರದಲ್ಲಿ ನಟಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತಂತೆ ತೆಲಂಗಾಣ ಸರ್ಕಾರ ರಚಿಸಿದ್ದ 'ತೆಲುಗು ಚಲನಚಿತ್ರ, ದೂರದರ್ಶನ ಉದ್ಯಮಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ತಾರತಮ್ಯ' ವರದಿಯನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ತೆಲುಗು ಸಿನಿಮಾದ ನಟಿಯರು ಒತ್ತಾಯಿಸಿದ್ದಾರೆ.
ತೆಲುಗು ಸಿನಿಮಾ ರಂಗದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ನಟಿ ಹಾಗೂ ನಿರೂಪಕಿ ಶ್ರೀ ರೆಡ್ಡಿ ಅವರು 2018ರಲ್ಲಿ ಹೈದರಾಬಾದ್‌ನ ಫಿಲ್ಮ್ ನಗರದಲ್ಲಿರುವ ಸಿನಿಮಾ ಚೇಂಬರ್ ಕಚೇರಿ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು.
ಈ ಕುರಿತು ತನಿಖೆ ನಡೆಸಿ ವರದಿ ನೀಡಲು ತೆಲಂಗಾಣ ಸರ್ಕಾರವು ಪೊಲೀಸ್ ಆಯುಕ್ತರು, ನಟಿಯರು, ನಿರ್ಮಾಪಕರು, ನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು 2019ರಲ್ಲಿ ರಚಿಸಿತ್ತು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಕುರಿತು ನಿಯಾಮವಳಿ ರೂಪಿಸುವ ಕುರಿತು ಶಿಫಾರಸು ಸಲ್ಲಿಸಲು ಉಪ ಸಮಿತಿಯನ್ನು ರಚಿಸಿತ್ತು. ಇದುವರೆಗೂ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.